ಸುರತ್ಕಲ್ ಟೋಲ್ ಗೇಟ್ ಬಳಿ ಹೈಡ್ರಾಮಾ: ಮುತ್ತಿಗೆ ಹಾಕಿದ ನೂರಾರು ಕಾರ್ಯಕರ್ತರು ಪೊಲೀಸ್ ವಶಕ್ಕೆ
Tuesday, October 18, 2022
ಸುರತ್ಕಲ್: ನಗರದ ಸುರತ್ಕಲ್ ಅಕ್ರಮ ಟೋಲ್ ತೆರವು ಆಗ್ರಹಿಸಿ ಪ್ರತಿಭಟನೆ ನಡೆಸಿರುವ ಆಕ್ರೋಶಿತ ಪ್ರತಿಭಟನಾಕಾರರು ಟೋಲ್ ಗೇಟ್ ನತ್ತ ನುಗ್ಗಿ ಟೋಲ್ ಸಂಗ್ರಾಹಕ ವಸ್ತುವನ್ನು ಒಡೆದು ಹಾಕಿರುವ ಘಟನೆ ನಡೆಯಿತು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಹತ್ತಿಕ್ಕಲು ಹರಸಾಹಸಪಟ್ಟರು. ಬಳಿಕ ಟೋಲ್ ಗೆ ಮುತ್ತಿಗೆ ಹಾಕಿರುವ ನೂರಾರು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ನಗರದ ಎನ್ಐಟಿಕೆ ಬಳಿಯಿರುವ ಸುರತ್ಕಲ್ ಟೋಲ್ ಗೇಟ್ ತೆರವು ನಿರ್ಣಾಯಕ ಕಾರ್ಯಾಚರಣೆಯ ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಯುತ್ತಿತ್ತು. ಆದರೆ ಏಕಾಏಕಿ ಪ್ರತಿಭಟನಾಕಾರರು ಟೋಲ್ ಗೇಟ್ ನತ್ತ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಬ್ಯಾರಿಕೇಡ್ ಅನ್ನು ಇಟ್ಟು ಆಕ್ರೋಶಿತ ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದ್ದಾರೆ. ಆದರೆ ನೂರಾರು ಪ್ರತಿಭಟನಾಕಾರರು ಏಕಾಏಕಿ ಬ್ಯಾರಿಕೇಡ್ ಗಳನ್ನು ತಳ್ಳಿಕೊಂಡು ಟೋಲ್ ನತ್ತ ಓಡಿ ಬಂದಿದ್ದಾರೆ.
ಸ್ಥಳದಲ್ಲಿ ಸಾವಿರಾರು ಪೊಲೀಸರನ್ನು ನಿಯೋಜನೆ ಮಾಡಿದ್ದರೂ, ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಆದರೂ ಟೋಲ್ ನತ್ತ ನುಗ್ಗಿದ ಪ್ರತಿಭಟನಾಕಾರರು ಟೋಲ್ ಸಂಗ್ರಹ ವಸ್ತುಗಳನ್ನು ಪುಡಿಗಟ್ಟಿದ್ದಾರೆ. ಈ ವೇಳೆ ಪೊಲೀಸರು ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸುರತ್ಕಲ್ ನ ಟೋಲ್ ತೆರವನ್ನು ಆಗ್ರಹಿಸಿ ಟೋಲ್ ವಿರೋಧಿ ಸಮಿತಿ ಸಾಕಷ್ಟು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಇಂದು ಟೋಲ್ ವಿರೋಧಿ ಸಮಿತಿ ನಿರ್ಣಾಯಕ ಹೋರಾಟವನ್ನು ಕೈಗೊಂಡಿತ್ತು. ಕೆಲಕಾಲದವರೆಗೆ ಟೋಲ್ ಗೇಟ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಆ ಬಳಿಕ ಪೊಲೀಸರು ಟೋಲ್ ಗೇಟ್ ನಲ್ಲಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ.