ಕಾಳಿ ವಿಗ್ರಹಗಳ ಧ್ವಂಸ ಪ್ರಕರಣಕ್ಕೆ ಟ್ವಿಸ್ಟ್: ಶಿಲ್ಪಿಯನ್ನೇ ಬಂಧಿಸಿದ ಪೊಲೀಸರು
Thursday, October 27, 2022
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ನಲ್ಲಿ ಅಕ್ಟೋಬರ್ 24 ರಂದು ಹಲವಾರು ಕಾಳಿ ದೇವಿಯ ವಿಗ್ರಹಗಳು ಧ್ವಂಸಗೊಂಡಿತ್ತು. ಪರಿಣಾಮ ಉದ್ವಿಗ್ನತೆ ಉಂಟಾಗಿತ್ತು. ಇದೀಗ ಪೊಲೀಸ್ ತನಿಖೆಯಲ್ಲಿ ಸ್ಪೋಟಕ ಸತ್ಯ ಬಯಲಾಗಿದ್ದು, ಶಿಲ್ಪಿಯೇ ವಿಗ್ರಹಗಳನ್ನು ಒಡೆದಿರುವುದು ಬೆಳಕಿಗೆ ಬಂದಿದೆ.
ದೀಪಾವಳಿ/ಕಾಳಿ ಪೂಜೆಯ ದಿನದಂದು ಮುಕಂದಪುರ ಪ್ರದೇಶದಲ್ಲಿರುವ ಶಿಲ್ಪಿ ಪ್ರಭಾತ್ ಸರ್ದಾರ್ ಎಂಬಾತ ನಿರ್ಮಿಸಿರುವ ಕಾಳಿ ಮೂರ್ತಿಗಳ ನಿರ್ಮಾಣದ ಕಟ್ಟಡದಲ್ಲಿ ಈ ಘಟನೆ ನಡೆದಿತ್ತು. ದುಷ್ಕರ್ಮಿಗಳು ರಾತ್ರಿ ವೇಳೆ ವರ್ಕ್‌ಶಾಪ್‌ಗೆ ನುಗ್ಗಿ ತಮ್ಮ ಹಲವಾರು ವಿಗ್ರಹಗಳಿಗೆ ಹಾನಿ ಮಾಡಿದ್ದಾರೆ ಎಂದು ಸರ್ದಾರ್ ಆರೋಪಿಸಿದ್ದರು. ಮೂರ್ತಿ ವಿಧ್ವಂಸಕತೆಯ ವಿಚಾರ ಸ್ಥಳೀಯರನ್ನು ಕೆರಳಿಸಿದ್ದು , ತಂಡೋಪತಂಡವಾಗಿ ಪ್ರದೇಶಕ್ಕೆ ಜನರು ಜಮಾಯಿಸತೊಡಗಿದ್ದಾರೆ. ಪರಿಣಾಮ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸ್‌ಡಿಪಿಒ ನೇತೃತ್ವದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬಳಿಕ ಪ್ರಕರಣದ ತನಿಖೆ ನಡೆದಿದೆ. ಈ ವೇಳೆ ಸಾಕಷ್ಟು ಖರೀದಿದಾರರು ಬಾರದಿರುವ ಹಿನ್ಬೆಲೆಯಲ್ಲಿ ಸರ್ದಾರ್ ಅವರೇ ವಿಗ್ರಹಗಳನ್ನು ಒಡೆದು ಹಾಕಿರುವುದು ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳು ಅಪರಾಧಿಯ ಪತ್ತೆಗೆ ಪೊಲೀಸರಿಗೆ ಸಹಾಯ ಮಾಡಿದೆ.
ಈ ಬಗ್ಗೆ ವಿಚಾರಣೆ ನಡೆಸಿದಾಗ, ಸರ್ದಾರ್ ಕಾಳಿ ಪೂಜೆಗೆ ಮುನ್ನ ತನ್ನ ವಿಗ್ರಹಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂಬ ಸುದ್ದಿ ಹರಡಿದರೆ ತನ್ನ ಖ್ಯಾತಿ ಹಾಳಾಗುತ್ತದೆ ಎಂಬ ಭಯವಿತ್ತು. ಇದು ಅವರ ಭವಿಷ್ಯದ ವ್ಯವಹಾರದ ಮೇಲೂ ಪರಿಣಾಮ ಬೀರಲಿದೆ ಎಂದು ಅವರು ಆತಂಕಗೊಂಡಿದ್ದರು. ಆದ್ದರಿಂದ ಅವರೇ ಮೂರ್ತಿಗಳನ್ನು ಧ್ವಂಸ ಮಾಡಿ ಕಟ್ಟುಕತೆ ಸೃಷ್ಟಿಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.