ಮಂಗಳೂರು: ಕೆಂಪೇಗೌಡರ ಕಾರ್ಯಕ್ರಮದಲ್ಲಿ ಟಿಪ್ಪು ವಿಚಾರವನ್ನೆಳೆದು ತಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್
Wednesday, October 26, 2022
ಮಂಗಳೂರು: ಕೆಂಪೇಗೌಡರ ಕಂಚಿನ ಪ್ರತಿಮೆಯ ನಿರ್ಮಾಣ ಹಾಗೂ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಬೇಕೆಂಬ ಪ್ರಸ್ತಾವನೆ ಬಂದ ವೇಳೆ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಬೇಕೆಂಬ ಚರ್ಚೆಗಳು ಕೇಳಿ ಬಂದಿತ್ತು. ಆದರೆ ಕೆಂಪೇಗೌಡರ ಎದುರು ಯಾವ ಟಿಪ್ಪುವೂ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಲೇವಡಿ ಮಾಡಿದರು.
ನಗರದ ಲೇಡಿಹಿಲ್ ಬಳಿ ಮನಪಾ ಈಜುಕೊಳದ ಆವರಣದಲ್ಲಿ ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಮಣ್ಣು ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಟಿಪ್ಪುವಿನ ನಿರಂತರ ದಾಳಿಗಳ ಬಗ್ಗೆ ಮಂಗಳೂರು ಹಾಗೂ ಕೊಡಗುಗಳಲ್ಲಿ ಸ್ಪಷ್ಟ ಉಲ್ಲೇಖಗಳಿವೆ. ಅಲ್ಲದೆ ಟಿಪ್ಪು ನಡೆಸಿರುವ ನೆತ್ತರಕೆರೆ, ಚರ್ಚ್ ಗಳ ಮೇಲಿನ ದಾಳಿ, ಮತಾಂತರ ಪ್ರಕ್ರಿಯೆಗಳು ಚರ್ಚೆಯಲ್ಲಿದೆ. ಆದರೆ ಕೆಂಪೇಗೌಡರು, ಒಡೆಯರ್ ಗಳ ವಿಚಾರದಲ್ಲಿ ಇಂತಹ ಚರ್ಚೆಗಳು, ಸಂದೇಹಗಳಿಲ್ಲ. ಕೆಂಪೇಗೌಡರು ಸರ್ವ ಸಮಾಜ, ಸಮುದಾಯಗಳನ್ನು ಒಂದಾಗಿಸಿ ಬೆಂಗಳೂರನ್ನು ಕಟ್ಟಿದ್ದಾರೆ. ಅಂತಹ ಶ್ರೇಷ್ಠ ಸಾಧಕರ ಸಾಧನೆಯ ಬಗ್ಗೆ ಶಾಶ್ವತವಾಗಿ ನೆನಪು ಮಾಡುವಂತಹ ಕಾರ್ಯವನ್ನು ಬಿಜೆಪಿ ಸರಕಾರ ಮಾಡಿದೆ ಎಂದರು.
ಕೆಂಪೇಗೌಡರು ಓರ್ವ ಸಾಧಕನಾಗಿ ಬೆಂಗಳೂರನ್ನು ನಿರ್ಮಾಣ ಮಾಡಿ ನಮ್ಮ ರಾಜ್ಯದ ಅಭಿವೃದ್ಧಿ ಪಥಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಮುಂದಿನ ಪೀಳಿಗೆಗೆ ಅವರ ಪರಿಚಯವಾಗಬೇಕು, ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳು ಶಾಶ್ವತವಾಗಿ ಉಳಿಯಬೇಕೆಂಬ ಉದ್ದೇಶದಿಂದ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸರಕಾರ ಕೆಂಪೇಗೌಡ ಥೀಮ್ ಪಾರ್ಕ್ ಹಾಗೂ ಭವ್ಯ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.