ಸುರತ್ಕಲ್ ಟೊಲ್ ಗೇಟ್ ಪ್ರತಿಭಟನೆ ಕೈಬಿಡಲು ರಾತ್ರೋರಾತ್ರಿ ಪ್ರತಿಭಟನಾಕಾರರ ಮನೆ ಬಾಗಿಲು ಬಡಿದ ಪೊಲೀಸರಿಂದ ನೋಟೀಸ್
Sunday, October 16, 2022
ಸುರತ್ಕಲ್: ನಗರದ ಸುರತ್ಕಲ್ ನ ಎನ್ಐಟಿಕೆ ಬಳಿಯಿರುವ ಟೋಲ್ ಗೇಟ್ ತೆರವು ಮಾಡಬೇಕೆಂದು ಅ.18ರಂದು ನಡೆಯಲಿರುವ ಪ್ರತಿಭಟನೆಯನ್ನು ಕೈಬಿಡುವಂತೆ ರಾತ್ರೋರಾತ್ರಿ ಪ್ರತಿಭಟನಾಕಾರರ ಮನೆ ಬಾಗಿಲು ಬಡಿದು ಸುರತ್ಕಲ್ ಪೊಲೀಸರು ನೋಟಿಸ್ ನೀಡಿರುವ ಘಟನೆ ನಡೆದಿದೆ.
ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬಿ.ಕೆ. ಇಮ್ತಿಯಾಝ್, ಪ್ರತಿಭಾ ಕುಳಾಯಿ, ರಾಘವೇಂದ್ರ ರಾವ್ ಸೇರಿದಂತೆ ಹಲವು ಮುಖಂಡರ ಮನೆಗಳಿಗೆ ಅ.15ರ ರಾತ್ರಿ ಭೇಟಿ ನೀಡಿರುವ ಸುರತ್ಕಲ್ ಪೊಲೀಸರು ಪ್ರತಿಭಟನೆ ಕೈಬಿಡುವಂತೆ ನೋಟಿಸ್ ನೀಡಿದ್ದಾರೆ.
ಈಗಾಗಲೇ ಜಿಲ್ಲಾಡಳಿತ ಹಾಗೂ ಎನ್ಎಚ್ಐಎ, ಪ್ರತಿಭಟನಾ ಸಮಿತಿಯ ಸಭೆಯನ್ನು ಕರೆದು ಟೋಲ್ ಗೇಟ್ ವಿರುದ್ಧದದ ಹೋರಾಟವನ್ನು ಹಿಂಪಡೆಯುವಂತೆ ಸೂಚಿಸಿತ್ತು. ಆದರೆ, ಅದನ್ನು ಹೋರಾಟ ಸಮಿತಿ ತಿರಸ್ಕರಿಸಿತ್ತು. ಹಾಗಾಗಿ ನೋಟಿಸ್ ತಲುಪಿದ ಕೂಡಲೇ ಡಿಸಿಪಿಯವರ ಕಚೇರಿಗೆ ಭೇಡಿ ನೀಡಿ ಹೋರಾಟ ಮುಂದುವರಿಸುವುದಿಲ್ಲ ಎಂದು ಮುಚ್ಚಳಿಗೆ ಬರೆದು ಕೊಡುವಂತೆ ಹೇಳಲಾಗಿದೆ. 2 ಲಕ್ಷ ರೂ ಬಾಂಡ್, ಸರಕಾರಿ ಅಧಿಕಾರಿ ಜಾಮೀನು ನೀಡಿ ಮುಚ್ಚಳಿಕೆ ಬರೆದುಕೊಡಲು ಸೂಚಿಸಲಾಗಿದೆ.
ಫೇಸ್ ಬುಕ್ ನಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, 'ಮಧ್ಯರಾತ್ರಿ ಪೊಲೀಸರನ್ನು ಹೋರಾಟಗಾರರ ಮನೆಗಳಿಗೆ ಕಳುಹಿಸುತ್ತೀರಾ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತರೆ ? ಮಹಿಳಾ ಹೋರಾಟಗಾರರ ಮನೆಗೂ ಕಾಳರಾತ್ರಿ "ಗಂಡಸು" ಪೊಲೀಸರ ದಂಡು !! ಅದಕ್ಕೆಲ್ಲ ಜನ ಹೆದರುವ ಕಾಲ ಮುಗಿದಿದೆ. ತುಳುನಾಡಿನ ಮುಂದೆ ಬೆತ್ತಲಾಗುತ್ತಿದ್ದೀರಿ ಬಿಜೆಪಿಗರೆ ಎಚ್ಚರ' ಎಂದು ಬರೆದಿದ್ದಾರೆ.