ಮಂಗಳೂರು: ರಾಜ್ಯ ಸರಕಾರದ ಬ್ರಹ್ಮಶ್ರೀ ನಾರಾಯಣ ಕೋಶ ಸ್ಥಾಪನೆಯ ಆದೇಶ ಪ್ರತಿಯನ್ನು ಸುದ್ದಿಗೋಷ್ಠಿಯಲ್ಲೇ ಹರಿದು ಹಾಕಿದ ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ
Sunday, October 30, 2022
ಮಂಗಳೂರು: ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ 26 ಪಂಗಡಗಳ ಏಳಿಗೆಯ ದೃಷ್ಟಿಯಿಂದ ಬ್ರಹ್ಮಶ್ರೀ ನಾರಾಯಣ ಕೋಶ ಸ್ಥಾಪಿಸುವ ರಾಜ್ಯ ಸರಕಾರದ ಆದೇಶ ಪ್ರತಿಯನ್ನು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿಯೇ ಹರಿದು ಹಾಕಿದ್ದಾರೆ.
ಮಂಗಳೂರಿನ ಶ್ರೀಕ್ಷೇತ್ರ ಕುದ್ರೋಳಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ 26 ಪಂಗಡಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸೇರಿದಂತೆ ನಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸದೆ ರಾಜ್ಯ ಸರಕಾರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಇದೀಗ ಸರಕಾರ ಬ್ರಹ್ಮಶ್ರೀ ನಾರಾಯಣ ಕೋಶ ಸ್ಥಾಪಿಸಲು ಹೊರಟಿದೆ. ಈ ಕೋಶಕ್ಕೆ ತಂದೆ - ತಾಯಿಯಿಲ್ಲ ಮೇಲ್ವರ್ಗದವರಿಗೆ ನಿಗಮ ಕೊಡುವ ರಾಜ್ಯ ಸರಕಾರ. ನಮ್ಮ ಸಮುದಾಯಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಕೋಶ ನೀಡಿ ಸರಕಾರ ನಾಟಕವಾಡುತ್ತಿದೆ ಎಂದು ಆಕ್ರೋಶಿತರಾಗಿ ಬ್ರಹ್ಮಶ್ರೀ ನಾರಾಯಣ ಕೋಶ ಸ್ಥಾಪನೆಯ ರಾಜ್ಯ ಸರಕಾರದ ಆದೇಶ ಪ್ರತಿಯನ್ನು ಹರಿದು ಹಾಕಿದರು.
ಈ ಕೋಶವನ್ನು ಯಾವಾಗ ಬೇಕಾದರೂ ತೆಗೆದು ಹಾಕಬಹುದು. ಇದಕ್ಕೊಂದು ಅಧ್ಯಕ್ಷ, ಡೈರೆಕ್ಟರ್ ಇಲ್ಲ. ಕೇವಲ ನಿವೃತ್ತ ಸರಕಾರಿ ಅಧಿಕಾರಿ ಅಥವಾ ನಿವೃತ್ತ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಿ ಕಾಟಚಾರಕ್ಕೆ ಮಾಡಲಾಗುತ್ತಿದೆ. ಆದ್ದರಿಂದ ನಮ್ಮ ಸಮುದಾಯಕ್ಕೆ ದ್ರೋಹ ಎಸಗಿರುವ ಸರಕಾರದ ನಡೆಯನ್ನು ಖಂಡಿಸುತ್ತದೆ. ಇಂತಹ ಕೋಶ ನಮಗೆ ಅವಶ್ಯಕತೆಯಿಲ್ಲ. ನಮಗೆ ನಾರಾಯಣ ಗುರು ನಿಗಮ ನಿರ್ಮಿಸಿ 500 ಕೋಟಿ ರೂ. ಮೀಸಲಿಡಬೇಕು. ಈ ಹಿನ್ನೆಲೆಯಲ್ಲಿ ಪೊಲೀಸ್ ಸರಕಾರದ ಬೋಗಸ್ ಕೋಶದ ಆದೇಶ ಪ್ರತಿಯನ್ನು ಹರಿದು ಹಾಕಿದ್ದೇನೆ ಎಂದು ಡಾ.ಶ್ರೀ ಪ್ರಣವಾನಂದ ಸ್ವಾಮೀಜಿ ಆಕ್ರೋಶಿತರಾಗಿ ಹೇಳಿದರು.