ಮಂಗಳೂರು: ಅವಾಚ್ಯವಾಗಿ ನಿಂದಿಸಿದ ಆರೋಪಿಗಳ ವಿರುದ್ಧ ಮಹಿಳಾ ಆಯೋಗಕ್ಕೆ ದೂರು; ಪ್ರತಿಭಾ ಕುಳಾಯಿ
Monday, October 24, 2022
ಮಂಗಳೂರು: ತನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯವಾಗಿ ನಿಂದಿಸಿ ಬರೆದ ಆರೋಪಿಗಳ ಮೇಲೆ ಎಫ್ಐಆರ್ ದಾಖಲಾಗಿ ಎರಡು ದಿನಗಳಾದರೂ, ಇನ್ನೂ ಯಾವುದೇ ಸ್ಪಂದನೆ ನನಗೆ ಸಿಕ್ಕಿಲ್ಲ. ಆದ್ದರಿಂದ ನಾನು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸುವೆ ಎಂದು ಮಾಜಿ ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಆಗ್ರಹಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಈ ಬಗ್ಗೆ ಮಾತನಾಡಲು ಇಂದು ನಾನು ಸಾಕಷ್ಟು ಕರೆ ಮಾಡಿದರೂ, ಅವರಿಂದ ಯಾವ ಪ್ರತಿಕ್ರಿಯೆಯೂ ಇಲ್ಲ. ಇದೀಗ ನನ್ನ ತೇಜೋವಧೆ ಮಾಡಿದ ಖಾಸಗಿ ಸುದ್ದಿವಾಹಿನಿಯ ಸಂಪಾದಕ ತನ್ನ ಪತ್ನಿ, ತಾಯಿಯನ್ನು ಕರೆದುಕೊಂಡು ಮನೆ ಬಿಟ್ಟು ಪರಾರಿಯಾಗಿದ್ದಾನೆ. ಎಲ್ಲರ ಮನೆಯಲ್ಲಿ ದೀಪಗಳನ್ನು ಹಚ್ಚಿ ದೀಪಾವಳಿಯ ಸಂಭ್ರಮ ಮನೆ ಮಾಡಿದ್ದರೆ. ಆತನ ಮನೆಗೆ ಬೀಗ ಹಾಕಲಾಗಿದೆ ಎಂದು ಕೇಳಿ ಸಂತೋಷವಾಗಿದೆ ಎಂದು ಹೇಳಿದರು.
ಮತ್ತೋರ್ವ ಆರೋಪಿ ಫೋನ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ಹೇಳುತ್ತಿದ್ದಾರೆ. ಅಲ್ಲದೆ ಪೊಲೀಸರು ತಾವು ಆರೋಪಿಯ ಪತ್ತೆಗೆ ಮೂರು ತಂಡ ಮಾಡಿದ್ದೇವೆ ಎನ್ನುತ್ತಾರೆ. ಆದರೆ ಯಾವ ಪ್ರಗತಿಯೂ ಇಲ್ಲ. ಆದ್ದರಿಂದ ನಾನು ಕಾನೂನು ಹೋರಾಟವನ್ನು ಮುಂದುವರಿಸುತ್ತೇನೆ. ಇದು ಸೋಶಿಯಲ್ ಮೀಡಿಯಾಗಳಲ್ಲಿ ಮಹಿಳೆಯರ ಬಗ್ಗೆ ಅವಹೇಳಕಾರಿಯಾಗಿ ಬರೆಯುವವರಿಗೆ ಪಾಠವಾಗಬೇಕು. ಇವರಿಬ್ಬರೂ ಕ್ಷಮೆ ಕೇಳುವವರೆಗೆ ನಾನು ಬಿಡುವುದಿಲ್ಲ ಎಂದು ಪ್ರತಿಭಾ ಕುಳಾಯಿ ಹೇಳಿದರು.