ಉಡುಪಿ ಕಾಸರಗೋಡು ಮಧ್ಯೆ 400 ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಗೆ ರೈತ ಸಂಘ ವಿರೋಧ
ಉಡುಪಿ ಕಾಸರಗೋಡು ಮಧ್ಯೆ 400 ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಗೆ ರೈತ ಸಂಘ ವಿರೋಧ
ಉಡುಪಿ - ಕಾಸರಗೋಡು ಮಧ್ಯೆ ಹಾದು ಹೋಗುವ 400 ಕೆವಿ ವಿದ್ಯುತ್ ಲೈನ್ ಕಾಮಗಾರಿಗೆ ರೈತ ಸಂಘದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುವ ಈ ವಿದ್ಯುತ್ ಲೈನ್ ನೂರಾರು ಎಕರೆ ರೈತರ ಕೃಷಿ ಭೂಮಿಯನ್ನೂ ನುಂಗಿ ಹಾಕಲಿದೆ. ಈ ಬಗ್ಗೆ ರೈತ ಸಂಘದ ನಾಯಕರು ಮತ್ತು ಕಾರ್ಯಕರ್ತರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು.
400 ಕೆವಿ ವಿದ್ಯುತ್ ಲೈನ್ ಕಾಮಗಾರಿ ನಡೆಯುವ ಪ್ರದೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು, ಸ್ಟರ್ಲೈಟ್ ಕಂಪೆನಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳ ತಂಡ ವೀರಕಂಭಕ್ಕೆ ಭೇಟಿ ನೀಡಿದಾಗ ರೈತ ಸಂಘದ ನಾಯಕರ ನೇತೃತ್ವದಲ್ಲಿ ಸ್ಥಳೀಯ ರೈತರಿಂದ ಆಕ್ರೋಶ ವ್ಯಕ್ತವಾಯಿತು.
ರಾಜ್ಯ ರೈತ ಸಂಘ-ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಹೋರಾಟದ ನೇತೃತ್ವ ವಹಿಸಿದ್ದರು. ಸ್ಥಳೀಯ ರೈತರು, ವೀರಕಂಬ ಗ್ರಾಮ ಪಂಚಾಯತ್ ಸದಸ್ಯರು, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪ್ರಮುಖರು ಮತ್ತು ವಿಟ್ಲ ರೈತ ಹೋರಾಟ ಸಮಿತಿ ನಾಯಕರು ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿದರು.
ಅಭಿವೃದ್ಧಿ ಹೆಸರಿನಲ್ಲಿ ರೈತರ ಜಮೀನುಗಳನ್ನು ನುಂಗಿ ಹಾಕುವ ಹುನ್ನಾರ ನಡೆಯುತ್ತಿದೆ. ರೈತರ ಅಮೂಲ್ಯ ಭೂಮಿಯನ್ನು ಬಲಿಕೊಟ್ಟು 400 ಕೆವಿ ವಿದ್ಯುತ್ ಮಾರ್ಗ ಅನುಷ್ಠಾನಕ್ಕೆ ರೈತ ಸಂಘದ ತೀವ್ರ ವಿರೋಧವಿದೆ. ಕಂಪೆನಿ ಮತ್ತು ಕಾಮಗಾರಿಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದೇವೆ ಎಂದು ರಾಜ್ಯ ರೈತ ಸಂಘ-ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಹೇಳಿದರು.
ಕೊಡಗು ಜಿಲ್ಲೆಯ ಮಾದರಿಯಲ್ಲಿ ಇಲ್ಲಿನ ಸಂಸದರು, ಶಾಸಕರು ಮತ್ತು ಜನಪ್ರತಿನಿಧಿಗಳು ರೈತರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ಅವರು ಆಗ್ರಹಿಸಿದರು.
ಈ ಮಾರಕ ವಿದ್ಯುತ್ ಲೈನ್ ಯೋಜನೆ ವಿರುದ್ಧ ಕಳೆದ 15 ತಿಂಗಳಿನಿಂದ ಹೋರಾಟ ನಡೆಯುತ್ತಿದೆ. ಸರ್ಕಾರ ಬಡ ರೈತರ ಕೃಷಿ ಭೂಮಿಯನ್ನು ಅನ್ಯಾಯದ ಮಾರ್ಗದಿಂದ ಕಬಳಿಸುತ್ತಿದೆ ಎಂದು ವಿಟ್ಲ ರೈತ ಹೋರಾಟ ಸಮಿತಿಯ ಅಧ್ಯಕ್ಷ ರಾಜೀವ ಗೌಡ ಹೇಳಿದರು.
ಬಳಿಕ ಅಧಿಕಾರಿಗಳಿಗೆ ರೈತ ಸಂಘದ ವತಿಯಿಂದ ಮನವಿಯನ್ನು ಅರ್ಪಿಸಲಾಯಿತು.