ನಾಪತ್ತೆಯಾಗಿದ್ದ ಪತ್ನಿ ಪ್ರಿಯಕರನೊಂದಿಗೆ ವಿವಾಹವಾಗಿ ಪತ್ತೆ: ಮನನೊಂದು ಪತಿ ಆತ್ಮಹತ್ಯೆ, ಅನಾಥರಾದ ಮಕ್ಕಳು
Monday, October 31, 2022
ಹುಣಸೂರು: ಮನೆ ತೊರೆದ ಪತ್ನಿ, ಪ್ರಿಯರಕನೊಂದಿಗೆ ವಿವಾಹವಾಗಿರುವ ವಿಚಾರ ತಿಳಿದು ಮನನೊಂದ ಪತಿ ಅತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕೊಯಮುತ್ತೂರು ಕಾಲನಿಯಲ್ಲಿ ನಡೆದಿದೆ. ತಂದೆ - ತಾಯಿಯ ಕೃತ್ಯದಿಂದ ಇವರಿಬ್ಬರ ಪುಟ್ಟ ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೊಯಮುತ್ತೂರು ಕಾಲನಿಯ ಕೃಷ್ಣೆಗೌಡರ ಪುತ್ರ ಸುರೇಶ್‌ಕುಮಾರ್(37) ಎಂಬವರು ನೇಣಿಗೆ ಶರಣಾದ ವ್ಯಕ್ತಿ.
ಮೃತ ಸುರೇಶ್‌ಕುಮಾರ್ ಹಾಗೂ ನೇತ್ರಾ ದಂಪತಿಗೆ 7 ಮತ್ತು 5 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುರೇಶ್‌ಕುಮಾರ್ ಕೂಲಿ ಕೆಲಸ ಮಾಡಿಕೊಂಡಿದ್ದರೆ. ಪತ್ನಿ ನೇತ್ರಾ ಹುಣಸೂರಿಗೆ ಸಮೀಪದ ಕಟ್ಟೆಮಳಲವಾಡಿಯ ಮಾರೀಸ್ ಸ್ಪೀನರ್ ಪ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಒಂದು ತಿಂಗಳ ಹಿಂದೆ ಫ್ಯಾಕ್ಟರಿಗೆ ಹೋದ ನೇತ್ರಾ ವಾಪಸ್ ಮನೆಗೆ ಬಂದಿರಲಿಲ್ಲ. ಎಲ್ಲಿ ಹುಡುಕಾಡಿದರೂ ಪತ್ನಿ ನೇತ್ರಾಳ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಸುರೇಶ್ ಕುಮಾರ್ ತನ್ನ ಪತ್ನಿ ನೇತ್ರಾಳನ್ನು ಹುಡುಕಿಕೊಡುವಂತೆ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ನೇತ್ರಾ ಮೊಬೈಲ್ ಲೊಕೇಶನ್ ಪತ್ತೆ ಹಚ್ಚಿದಾಗ ಆಕೆ ಶಿವಮೊಗ್ಗದಲ್ಲಿ ಪತ್ತೆಯಾಗಿದ್ದಾಳೆ. ಅಲ್ಲಿನ ಪೋಲಿಸರು ಠಾಣೆಗೆ ಕರೆಯಿಸಿ ವಿಚಾರಿಸಿದಾಗ ಆಕೆ ತನಗೆ ಪತಿಯೊಂದಿಗೆ ಬಾಳಲು ಇಷ್ಟವಿಲ್ಲ. ಆತ ನನ್ನೊಂದಿಗೆ ಹೊಂದಿಕೊಳ್ಳುವುದಿಲ್ಲ, ಹೀಗಾಗಿ ತಾನು ನನ್ನ ಜೊತೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಉದ್ದೂರು ಗ್ರಾಮದ ಪ್ರಿಯಕರನೊಂದಿಗೆ ಬಂದಿದ್ದೇನೆ. ಶಿವಮೊಗ್ಗಕ್ಕೆ ಬಂದು 15 ದಿನಗಳ ಹಿಂದೆ ತಾವಿಬ್ಬರೂ ಸೊರಬ ತಾಲೂಕಿನ ದೇವಸ್ಥಾನದಲ್ಲಿ ಹೊಳೆಜೋಳದಗುಡ್ದ ಗ್ರಾಮದ ಗೋಮಂತೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿರುವುದಾಗಿ ಹೇಳಿದ್ದಾಳೆ.
ಅಲ್ಲದೆ ನೇತ್ರಾ ತಾನು ಪ್ರಿಯಕರನೊಂದಿಗೆ ವಿವಾಹವಾಗಿರುವ ಪೋಟೋವನ್ನು ಪತಿಗೆ ವ್ಯಾಟ್ಸಪ್‌ನಲ್ಲಿ ಕಳುಹಿಸಿದ್ದಾಳೆ. ತನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ತಾವು ಮತ್ತೆ ಬರುವುದಿಲ್ಲವೆಂದು ತಿಳಿಸಿದ್ದಾಳೆ. ಇದರಿಂದ ಮನನೊಂದಿದ್ದ ಸುರೇಶ್‌ಕುಮಾರ್ ಭಾನುವಾರ ಮಧ್ಯಾಹ್ನ ತನ್ನ ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಪುತ್ರನ ಸಾವಿಗೆ ನೇತ್ರಾಳೇ ಕಾರಣವಾಗಿದ್ದು, ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುರೇಶ್ ಕುಮಾರ್ ತಂದೆ ಕೃಷ್ಣೆಗೌಡ ಗ್ರಾಮಾಂತರ ಠಾಣೆ ಪೋಲಿಸರಿಗೆ ದೂರು ನೀಡಿದ್ದಾರೆ.
ತಂದೆ - ತಾಯಿಯರ ಕೃತ್ಯದಿಂದ ಏನೂ ಅರಿಯದ ಪುಟ್ಟ ಹೆಣ್ಣು ಮಕ್ಕಳು ಅಕ್ಷರಶಃ ಅನಾಥರಾಗಿದ್ದಾರೆ.