10 ತಿಂಗಳಿನಲ್ಲಿ 55ಲೀ. ಎದೆಹಾಲನ್ನು ದಾನ ಮಾಡಿ ದಾಖಲೆ ಬರೆದ ತಮಿಳುನಾಡಿನ ಮಹಿಳೆ
Wednesday, November 9, 2022
ಕೊಯಮತ್ತೂರು: ತಾಯಿಯ ಎದೆಹಾಲು ಅಮೃತಕ್ಕೆ ಸಮಾನ. ಎದೆಹಾಲು ಕೊರತೆಯಾದ ವೇಳೆ ದಾನಿಗಳ ಮೊರೆ ಹೋಗುತ್ತಾರೆ. ಆದರೆ ತಮಿಳುನಾಡಿನಲ್ಲೊಬ್ಬ ಮಹಿಳೆಯೊಬ್ಬರು 10 ತಿಂಗಳಿನಲ್ಲಿ 55ಲೀ. ಎದೆಹಾಲನ್ನು ದಾನ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದ್ದಾರೆ. ಅಲ್ಲದೆ ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲೂ ಸ್ಥಾನ ಗಿಟ್ಟಿಸಿಕೊಂಡು ಪದಕ ಪಡೆದಿದ್ದಾರೆ.
ತಮಿಳುನಾಡಿನ ಕೊಯಮುತ್ತೂರಿನ ಸಿಂಧೂ ಮೋನಿಕಾ ಈ ದಾಖಲೆ ಬರೆದವರು. ಒಂದು ವರ್ಷದ ಮಗುವಿರುವ ಇವರು ಎದೆಹಾಲು ಕೊರತೆಯ ಬಗ್ಗೆ ಅರಿತಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಎದೆಹಾಲು ದಾನ ಮಾಡುವುದನ್ನು ಜಾಲಾಡಿದ್ದಾರೆ. ಬಳಿಕ ಅಮೃತಂ ಎದೆಹಾಲು ದಾನ ಸಂಸ್ಥೆಯನ್ನು ಸಂಪರ್ಕಿಸಿ ಎದೆಹಾಲನ್ನು ದಾನ ಮಾಡಲು ತೊಡಗಿದ್ದಾರೆ.
ಸಿಂಧೂ ಮೋನಿಕಾ ಎದೆಹಾಲನ್ನು ಶೇಖರಿಸುವ, ಸುರಕ್ಷಿತವಾಗಿಡುವ ಬಗ್ಗೆ ಸಲಹೆ ಪಡೆದು ಕಳೆದ 10 ತಿಂಗಳಿನಿಂದ 55 ಲೀ. ಎದೆಹಾಲನ್ನು ಸಂಗ್ರಹಿಸಿದ್ದಾರೆ. ಇದನ್ನು ಕೊಯಮತ್ತೂರಿನ ಸರಕಾರಿ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಅಲ್ಲದೆ ಏಷ್ಯನ್ ಬುಕ್ ಆಫ್ ರೆಕಾರ್ಡ್ ನಲ್ಲೂ ದಾಖಲಾಗಿ ಪ್ರಮಾಣ ಪತ್ರ ಹಾಗೂ ಪದಕ ನೀಡಿ ಗೌರವಿಸಿದೆ.