ಮಂಗಳೂರು ಸೆನ್ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: 132 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ವಶಕ್ಕೆ
Friday, November 18, 2022
ಮಂಗಳೂರು: ಮಂಗಳೂರು ಸೆನ್ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿ 132 ಕೆಜಿ ಗಾಂಜಾ ಸಾಗಾಟ ಮಾಡಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಇಬ್ಬರು ಆರೋಪಿಗಳನ್ನು ಹೆಡೆಮುರಿಕಟ್ಟಿ ಬಂಧಿಸಿದ್ದಾರೆ.
ರಮೀಜ್, ಅಬ್ದುಲ್ ಖಾದರ್ ಬಂಧಿತ ಆರೋಪಿಗಳು. ಇವರು ಆಂಧ್ರ ಪ್ರದೇಶದ ವಿಶಾಖಪಟ್ಟಣಂನಿಂದ ಗಾಂಜಾ ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರ ಹೊರವಲಯದ ಮುಡಿಪು ಬಳಿಯ ಮುರ್ನಾಡು ಗ್ರಾಮದ ಕಾಯರ್ ಗೋಳಿ ಎಂಬಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರಿಂದ 132 ಕೆ.ಜಿ ಗಾಂಜಾ, ಶಸ್ತ್ರಾಸ್ತ್ರಗಳು ಸೇರಿದಂತೆ 39 ಲಕ್ಷ ರೂ. ಮೌಲ್ಯದ ಸೊತ್ತನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರು ವಿಶಾಖಪಟ್ಟಣಂನ ಕಾಡಿನಿಂದ ಗಾಂಜಾ ತಂದು ಮಂಗಳೂರು, ಉಡುಪಿ, ಕಾಸರಗೋಡಿನ ಹಲವು ಭಾಗದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಹಿಂದೆಯೂ ಹಲವು ಬಾರಿ ಗಾಂಜಾ ಸಾಗಾಟ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಆರೋಪಿ ರಮೀಝ್ ಮೇಲೆ ಈ ಹಿಂದೆ ಆರು ಪ್ರಕರಣಗಳು ದಾಖಲಾಗಿದ್ದರೆ, ಅಬ್ದುಲ್ ಖಾದರ್ ಮೇಲೂ ಮೂರು ಪ್ರಕರಣಗಳು ದಾಖಲಾಗಿದೆ. ಆರೋಪಿಗಳೊಂದಿಗೆ ಮತ್ತಷ್ಟು ಗಾಂಜಾ ಮಾರಾಟಗಾರರು ಸೇರಿರುವ ಸಾಧ್ಯತೆಯಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಕುಮಾರ್ ಮಾಹಿತಿ ನೀಡಿದ್ದಾರೆ.