ಸುರತ್ಕಲ್: ವಿಮಾನಕ್ಕೆ ಬಳಕೆಯಾಗುವ ಪೆಟ್ರೋಲ್ ಕಳವು ಸ್ಥಳಕ್ಕೆ ಅಧಿಕಾರಿಗಳ ದಾಳಿ; 2 ಟ್ಯಾಂಕರ್ ಗಳು, ಪಿಕ್ಅಪ್ ವಶಕ್ಕೆ
Tuesday, November 8, 2022
ಸುರತ್ಕಲ್: ವಿಮಾನಕ್ಕೆ ಬಳಕೆ ಮಾಡುವ ಪೆಟ್ರೋಲ್‌ಗೆ ಸೀಮೆಎಣ್ಣೆ ರಾಸಾಯನಿಕ ಕಲಬೆರಕೆ ಮಾಡಿ ಪೆಟ್ರೋಲ್ ಕಳವು ಮಾಡಲಾಗುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದ ಘಟನೆ ಘಟನೆ ಸುರತ್ಕಲ್ ಬಳಿಯ ಬಾಳಾದಲ್ಲಿ ನಡೆದಿದೆ. ಈ ವೇಳೆ ಎರಡು ಟ್ಯಾಂಕರ್ ಗಳು, ಒಂದು ಪಿಕ್ಅಪ್ ಸಹಿತ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಲ್ಲಿ ವಿಮಾನಕ್ಕೆ ಬಳಕೆಯಾಗುವ ದುಬಾರಿ ಬೆಲೆಯ ಪೆಟ್ರೋಲ್ ಸರಬರಾಜು ಆಗುತ್ತಿದ್ದ ಟ್ಯಾಂಕರ್ ನಿಂದ ಪೆಟ್ರೋಲ್ ಕಳವು ಮಾಡಲಾಗುತ್ತಿತ್ತು. ಬಳಿಕ ಅದಕ್ಕೆ ಸೀಮೆ ಎಣ್ಣೆ ಕಲಬೆರಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ದಾಳಿಯ ಸಂದರ್ಭ ಗುಪ್ತವಾಗಿ ನಿರ್ಮಿಸಿದ ಅಂಡರ್ ಟ್ಯಾಂಕ್ ಕೂಡಾ ಪತ್ತೆಯಾಗಿದೆ. ಎರಡು ಟ್ಯಾಂಕರ್ ಗಳಿಂದ ಪೆಟ್ರೋಲ್ ಅನ್ನು ಗುಪ್ತವಾಗಿ ನಿರ್ಮಿಸಿದ ಟ್ಯಾಂಕ್ ಗೆ ತುಂಬಿಸಿ ಬಳಿಕ ಟ್ಯಾಂಕರ್ ಗೆ ಸೀಮೆ ಎಣ್ಣೆಯನ್ನು ರಾಸಾಯನಿಕ ಮಿಶ್ರಣ ಮಾಡಿ ಕಲಬೆರಕೆ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಆಹಾರ ಉಪನಿರ್ದೇಶಕ ಮಾಣಿಕ್ಯ , ಆಹಾರ ನಿರೀಕ್ಷಕ ಕೆ . ಪ್ರಮೋದ್ ಕುಮಾರ್ ಹಾಗೂ ಚರಣ್, ಪೊಲೀಸ್ ಸಬ್‌ಇನ್ಸೆಕ್ಟರ್ ಪುನೀತ್ ಗಾವಂಕರ್ ನೇತೃತ್ವದಲ್ಲಿ ತಂಡ ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.