ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ ಸಮಾರಂಭ 2022
ಮೂಡುಬಿದಿರೆ: ಆಯುರ್ವೇದ ವೈದ್ಯಕೀಯ ಪದ್ಧತಿ ಇಂದು ವಿಶ್ವ ಮಾನ್ಯತೆ ಪಡೆದಿದೆ. ಭಾರತಕ್ಕೆ ಮಾತ್ರ ಸೀಮಿತವಾಗಿದ್ದ ಆಯುರ್ವೇದವನ್ನು ಇಂದು 28 ರಾಷ್ಟ್ರಗಳಲ್ಲಿ ಚಿಕಿತ್ಸಾ ಪದ್ಧತಿಯಾಗಿ ಬಳಸಲಾಗುತ್ತಿದೆ. ಇದು ಆಯುರ್ವೇದ ಲೋಕದ ಕ್ರಾಂತಿ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹೇಳಿದರು.
ಅವರು ಮಂಗಳವಾರ ಆಳ್ವಾಸ್ ಆಯುರ್ವೇದ ಕಾಲೇಜಿನ ಧನ್ವಂತರಿ ಪೂಜಾ ಮಹೋತ್ಸವ ಮತ್ತು ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ ಸಮಾರಂಭ 2022 ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಹಿಂದೆ ಸಂಪ್ರದಾಯಿಕ ಚಿಕಿತ್ಸೆ ಎಂದು ಕಡೆಗಣಿಸಿದ ಆಯುರ್ವೇದವನ್ನು ಇಂದು ಜಗತ್ತೆ ಒಪ್ಪಿದೆ. ಸರ್ವ ರೋಗಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರ ಬಗ್ಗೆ ಇಲ್ಲಿ ಉಲ್ಲೇಖವಿದೆ ಹಾಗಾಗಿ ಈ ಕ್ಷೇತ್ರದಲ್ಲಿ ಇನ್ನಷ್ಟೂ ಸಂಶೋಧನೆ ನಡೆಯಬೇಕು. ಇದರಿಂದಾಗಿ ಆಯುರ್ವೇದ ವೈದ್ಯ ಪದ್ದತಿ ಜಾಗತಿಕ ಮಟ್ಟದಲ್ಲಿ ಉತ್ತಮ ಸ್ಪರ್ಧೆ ನೀಡಲು ಸಾಧ್ಯ ಎಂದರು.
ಆಳ್ವಾಸ್ ಧನ್ವಂತರಿ ಪ್ರಶಸ್ತಿ 2022 ಪುರಸ್ಕೃತ ಡಾ.ಭರತೇಶ್ ಆದಿರಾಜ ಮಾತನಾಡಿ ನಾವು ಆಯುರ್ವೇದಿಂದ ಕಲಿತದ್ದು ಸಾಸಿವೆ ಕಾಳಿನಷ್ಟು, ಕಲಿಯುವಂತದ್ದು ಬಹಳಷ್ಟಿದೆ ಎಂಬುದನ್ನು ಪ್ರತಿಯೊಬ್ಬರು ಮನದಟ್ಟು ಮಾಡಿಕೊಳ್ಳಬೇಕಾಗಿದೆ ಎಂದರು.
ಆಳ್ವಾಸ್ ಆಯುರ್ವೇದ ಕಾಲೇಜಿನ ಆವರಣದಲ್ಲಿ ಗಣಹೋಮ ಮತ್ತು ಧನ್ವಂತರಿ ಪೂಜೆ , ಪೂರ್ಣಾಹುತಿ ಹಾಗೂ ಭಕ್ತಿ ಗಾನ ಸುಧೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ನಂತರ ಶಿಷ್ಯೋಪನಯನ ಸಂಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು
ಕಾರ್ಕಳ ಜೀವನ ಕ್ಲಿನಿಕ್‌ನ ವೈದ್ಯ ಡಾ. ಭರತೇಶ್ ಆದಿರಾಜ್, ಯೆನೆಪೋಯ ಮೆಡಿಕಲ್ ಕಾಲೇಜಿನ ಶರೀರ ರಚನಾ ಶಾಸ್ತç ವಿಭಾಗದ ಸಹಪ್ರಾಧ್ಯಪಕಿ ಹಾಗೂ ಹಿರಿಯ ವಿದ್ಯಾರ್ಥಿನಿ ಡಾ. ಅಶ್ವಿನಿ ಎಸ್. ಶೆಟ್ಟಿ, ವಯನಾಡಿನ ಜೀವೆಸ್ ಆಯುರ್ವೇದ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ. ಸಮೀರ್ ಆಲಿಯವರಿಗೆ ಆಳ್ವಾಸ್ ಧನ್ವಂತರಿ ಪ್ರಶಸ್ತಿ ನೀಡಿ ಪುರಸ್ಕೃರಿಸಲಾಯಿತು.
ಅಂತಿಮ ವರ್ಷದ ಬಿಎಎಂಎಸ್ ಪದವಿಯಲ್ಲಿ ಅತ್ಯಧಿಕ ಅಂಕಗಳಿಸಿದ ಆಳ್ವಾಸ್ ಆಯುರ್ವೇದ ಕಾಲೇಜಿನ ಅಪರ್ಣಾ ಸುನಿಲ್‌ಕುಮಾರ್ ಜೀವಕ ಪ್ರಶಸ್ತಿ ಹಾಗೂ ಅಂತಿಮ ವರ್ಷದ ಬಿಎಎಂಎಸ್ ಪದವಿಯಲ್ಲಿ ದ್ವಿತೀಯ ಸ್ಥಾನಗಳಿಸಿದ ಡಾ. ಅಕ್ಷತ ಗೂಗಟ್ ಆಯುರ್ ವಿಶಾರಧ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ ಸಜಿತ್ ಎಂ, ಕಾಲೇಜಿನ ಯು.ಜಿ ಸ್ಟಡೀಸ್ ಡೀನ್ ಡಾ. ಪ್ರಶಾಂತ್ ಜೈನ್, ಕಾಲೇಜಿನ ಪಿ.ಜಿ ಸ್ಟಡೀಸ್ ಡೀನ್ ಡಾ.ರವಿ ಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಉಪನ್ಯಾಸಕಿ ಡಾ.ಗೀತಾ ಎಂ.ನಿರೂಪಿಸಿದರು.