
ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಪ್ರೇಯಸಿಯನ್ನೇ ಕತ್ತು ಹಿಸುಕಿ ಕೊಲೆಗೈದು 35 ತುಂಡುಗಳನ್ನಾಗಿ ಮಾಡಿ ಎಸೆದ ಕಿರಾತಕ ಪ್ರಿಯಕರ
ನವದೆಹಲಿ: ಇಡೀ ದೇಶವೇ ಬೆಚ್ಚಿ ಬೀಳಿಸುವ ಕೊಲೆ ಕೃತ್ಯವೊಂದು ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಸಂಗಾತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪಿ ಈ ಕೊಲೆ ಪ್ರಕರಣವನ್ನು ಮುಚ್ಚಿಡಲು ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ 18 ದಿನಗಳ ಕಾಲ ದೆಹಲಿಯ ಮೆಹ್ರೌಲಿ ಅರಣ್ಯದಲ್ಲಿ ಎಸೆದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೌದು... ಶ್ರದ್ಧಾ ಎಂಬ ಹಿಂದೂ ಯುವತಿ, ಅಫ್ತಾಬ್ ಅಮೀನ್ ಪೂನಾವಾಲಾನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಇವರ ಈ ಪ್ರೀತಿಯನ್ನು ಶ್ರದ್ಧಾ ಮನೆಯವರು ವಿರೋಧಿಸಿದ್ದರು. ಅದಕ್ಕಾಗಿ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಇಬ್ಬರೂ ಪ್ರತ್ಯೇಕವಾಗಿ ವಾಸಿಸತೊಡಗಿದ್ದರು. ಈ ನಡುವೆ ವಿವಾಹವಾಗಲು ಒತ್ತಾಯಿಸುತ್ತಿದ್ದ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಲೆಗೈದ ಅಫ್ತಾಬ್ ಅಮೀನ್ ಪೂನಾವಾಲಾ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಕಾಡಿನಲ್ಲಿ ಎಸೆದಿದ್ದಾನೆ.
26 ವರ್ಷದ ಶ್ರದ್ಧಾ ಮುಂಬೈನ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆಕೆಗೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲನ ಪರಿಚಯವಾಗಿದೆ. ಕೆಲ ಕಾಲದ ಬಳಿಕ ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿದ್ದರು. ಆದರೆ ಶ್ರದ್ಧಾ ಕುಟುಂಬಕ್ಕೆ ಇವರ ಸಂಬಂಧದ ಬಗ್ಗೆ ತಿಳಿದು ವಿರೋಧಿಸಲು ಆರಂಭಿಸಿದ್ದಾರೆ. ಆದ್ದರಿಂದ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಈ ಜೋಡಿ ದೆಹಲಿಯ ಮೆಹ್ರೌಲಿಯ ಫ್ಲಾಟ್‌ನಲ್ಲಿ ಜೊತೆಯಾಗಿ ವಾಸಿಸಲು ಪ್ರಾರಂಭಿಸಿದೆ.
ಈ ನಡುವೆ ಶ್ರದ್ಧಾ ತನ್ನನ್ನು ಮದುವೆಯಾಗುವಂತೆ ಅಫ್ತಾಬ್ ಅಮೀನ್ ನನ್ನು ಒತ್ತಾಯಿಸಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗುತ್ತಿತ್ತು. ಮೇ 18ರಂದು ಮತ್ತೆ ಇಬ್ಬರ ನಡುವೆ ಜಗಳವಾಗಿದೆ. ಜಗಳ ಅತೀರೇಕಕ್ಕೆ ಹೋಗಿದ್ದು, ಆರೋಪಿ ಅಫ್ತಾಬ್ ಅಮೀನ್ ಪೂನಾವಲಾ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿದ್ದಾನೆ. ಮೃತ ದೇಹ ಕೊಳೆತು ವಾಸನೆ ಬರದಂತೆ ತಡೆಯಲು ಮತ್ತು ತುಂಡುಗಳನ್ನು ಇರಿಸಿಕೊಳ್ಳಲು 300 ಲೀಟರ್ ಫ್ರಿಜ್ ಅನ್ನು ಖರೀದಿಸಿ ಅದರಲ್ಲಿ ಇಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶ್ರದ್ಧಾ ದೇಹದ ತುಂಡುಗಳನ್ನು ಎಸೆಯಲು ಆರೋಪಿ ಅಫ್ತಾಬ್ ಅಮೀನ್ 18 ದಿನಗಳ ಕಾಲ ಮೆಹ್ರೌಲಿ ಅರಣ್ಯಕ್ಕೆ ತೆರಳಿದ್ದಾನೆ. ಕಾಡಿನ ವಿವಿಧ ಪ್ರದೇಶಗಳಲ್ಲಿ ದೇಹದ ತುಂಡುಗಳನ್ನು ಎಸೆದಿದ್ದಾನೆ. ತನ್ನ ಪ್ರೇಯಸಿಯ ದೇಹದ ಭಾಗಗಳನ್ನು ಬಿಸಾಡಲು ಆತ ಪ್ರತಿದಿನ ಮುಂಜಾನೆ 2 ಗಂಟೆಗೆ ಕಾಡಿಗೆ ಹೊರಹೋಗುತ್ತಿದ್ದ ಎನ್ನಲಾಗಿದೆ.
ಶ್ರದ್ಧಾ ತನ್ನ ಮನೆಯವರ ಫೋನ್ ಕರೆಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದರಿಂದ ಕಂಗಾಲಾದ ಆಕೆಯ ತಂದೆ ವಿಕಾಸ್ ಮದನ್ ತಮ್ಮ ಪುತ್ರಿಯನ್ನು ನೋಡಲು ನವೆಂಬರ್ 8 ರಂದು ದೆಹಲಿಗೆ ಬಂದಿದ್ದಾರೆ. ಆದರೆ, ಅವರ ಫ್ಲ್ಯಾಟ್‌ಗೆ ಬೀಗ ಹಾಕಿರುವುದು ಕಂಡುಬಂದಿದೆ. ತಕ್ಷಣ ಅವರು ಮೆಹ್ರೌಲಿ ಪೊಲೀಸರನ್ನು ಸಂಪರ್ಕಿಸಿ, ಅಪಹರಣದ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಅಫ್ತಾಬ್ ಅಮೀನ್ ನನ್ನು ಬಂಧಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ಆಕೆಯ ಕೊಲೆ ಕೃತ್ಯ ಬಯಲಾಗಿದೆ.
ಸದ್ಯ ಅರಣ್ಯದಿಂದ ಕೆಲವು ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ, ಅವು ಮಾನವ ಅವಶೇಷಗಳೇ ಎಂಬುದು ಇನ್ನು ತಿಳಿದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.