ಫೋನ್ ಬಿಲ್ ಕಟ್ಟಲೆಂದು ಬಂದಿದ್ದ ವ್ಯಕ್ತಿಯ 74ಸಾವಿರ ರೂ. ಹಣವಿದ್ದ ಬ್ಯಾಗ್ ಎಗರಿಸಿದ ಕೋತಿ
Friday, November 18, 2022
ಶಿಮ್ಲಾ: ಫೋನ್ ಬಿಲ್ ಕಟ್ಟಲೆಂದು ಬಂದಿದ್ದ ಗ್ರಾಹಕರೊಬ್ಬರ ಮೇಲೆ ಕೋತಿಯೊಂದು ಎಗರಿ, 74 ಸಾವಿರ ರೂ. ಹಣವಿದ್ದ ಬ್ಯಾಗ್ ಅನ್ನು ಕಸಿದು ಪರಾರಿಯಾದ ವಿಚಿತ್ರ ಘಟನೆಯೊಂದು ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿರುವ ಮಾಲ್ ರಸ್ತೆಯ ಬಿಎಸ್ಎನ್ಎಲ್ ಕಚೇರಿಯಲ್ಲಿ ನಡೆದಿದೆ.
ಈ ಪ್ರದೇಶದಲ್ಲಿ ಕೋತಿಗಳ ದಾಳಿ ಸರ್ವೇ ಸಾಮಾನ್ಯ ಎಂದು ಹೇಳಲಾಗಿದೆ. ಕೋತಿ ಬಿಎಸ್ಎನ್ಎಲ್ ಕಚೇರಿಯ ಮೇಲೆ ಕುಳಿತು, ತಾನು ಕಸಿದುಕೊಂಡಿದ್ದ ಬ್ಯಾಗಿನಿಂದ ನೋಟುಗಳನ್ನು ಹೊರತೆಗೆದು ಹರಿದು ಹಾಕಿದೆ. ಘಟನೆಯ ಬಳಿಕ 70 ಸಾವಿರ ರೂ. ಮೌಲ್ಯದ ನೋಟುಗಳು ಪತ್ತೆಯಾಗಿದೆ. 4 ಸಾವಿರ ರೂ. ಮೌಲ್ಯ ನೋಟುಗಳನ್ನು ಕೋತಿ ಹರಿದು ಹಾಕಿದೆ. ಈ ವೇಳೆ ಸಾಕಷ್ಟು ಸಂಖ್ಯೆಯ ಜನರು ಜಮಾಯಿಸಿ ಕೋತಿಯ ಚೇಷ್ಟೆಯನ್ನು ನಿಂತು ನೋಡಿದ್ದಾರೆ.
ಇದಕ್ಕೂ ಮುನ್ನ ಕೋತಿಯಿಂದ ಬ್ಯಾಗ್ ಕಿತ್ತುಕೊಳ್ಳಲು ಜನರು ಸಾಕಷ್ಟು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗಲಿಲ್ಲ. ಬ್ಯಾಗ್ ನಲ್ಲಿದ್ದ ಕೆಲವು ಪತ್ರಗಳನ್ನು ಸಹ ಹರಿದು ಗಾಳಿಗೆ ತೂರಿದೆ. ಸಾಕಷ್ಟು ಚೇಷ್ಟೆಯನ್ನು ಮಾಡಿದ ಬಳಿಕ ಬ್ಯಾಗ್ ಅನ್ನು ಅಲ್ಲಿಯೇ ಬಿಟ್ಟು ಕೋತಿ ಅಲ್ಲಿಂದ ಪರಾರಿಯಾಗಿದೆ. ಬಿಎಸ್ಎನ್ಎಲ್ ಕಚೇರಿಯ ಸಿಬ್ಬಂದಿ ಕಟ್ಟಡದ ಮೇಲೆ ಏರಿ ನೋಡಿದಾಗ ಬ್ಯಾಗ್‌ನಲ್ಲಿ 70 ಸಾವಿರ ರೂಪಾಯಿ ಹಣ ಸುರಕ್ಷಿತವಾಗಿದ್ದವು. 4 ಸಾವಿರ ರೂ. ಮಾತ್ರ ಹಾಳಾಗಿತ್ತು.
ಕೋತಿಯನ್ನು ಬೆದರಿಸಲು ಏರ್ ಗನ್ ಸಹ ಬಳಸಲಾಯಿತು ಎಂದು ಟೆಲಿಕಾಂ ತಂತ್ರಜ್ಞ ಮುಜೀಬ್ ರೆಹಮಾನ್ ಹೇಳಿದ್ದಾರೆ. ಕಚೇರಿಯ ಕೌಂಟರ್ ವರೆಗೆ ಮಂಗಗಳು ಹೆಚ್ಚಾಗಿ ಬರುತ್ತವೆ ಎಂದು ತಿಳಿಸಿದರು. ಕೋತಿಗಳ ನಿರಂತರ ದಾಳಿಯ ವಿರುದ್ಧ ಸರ್ಕಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.