
ಹೈದರಾಬಾದ್ ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿ ಮೇಲೆ ಹಲ್ಲೆ: 8ಮಂದಿ ಆರೋಪಿಗಳು ಅರೆಸ್ಟ್
ಹೈದರಾಬಾದ್: ತೆಲಂಗಾಣ ರಾಜ್ಯದ ಹೈದರಾಬಾದ್‌ನ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿ 'ಅಲ್ಲಾಹೋ ಅಕ್ಬರ್' ಎಂದು ಕೂಗುವಂತೆ ಬಲವಂತಪಡಿಸಿದ್ದಕ್ಕಾಗಿ 8 ಮಂದಿ ವಿದ್ಯಾರ್ಥಿಗಳನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್ ನ ಐಸಿಎಫ್‌ಐ ಫೌಂಡೇಶನ್ ಫಾರ್ ಹೈಯರ್ ಎಜುಕೇಶನ್ (ಐಎಫ್‌ಹೆಚ್‌ಇ)ನಲ್ಲಿ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿ ಹಿಮಾಂಕ್ ಬನ್ಸಾಲ್ ಎಂಬಾತನ ಮೇಲೆ ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿಗಳ ಗುಂಪು ಕಪಾಳಮೋಕ್ಷ ಮಾಡಿ, ಮನಬಂದಂತೆ ಹಲ್ಲೆ ನಡೆಸಿ ಕೈಗಳನ್ನು ತಿರುಚುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಆರೋಪಿಗಳು ಆತನನ್ನು ಥಳಿಸುವುದನ್ನು ಮುಂದುವರೆಸಿದ್ದರಿಂದ ಆತ "ಜೈ ಮಾತಾ ದಿ' ಹಾಗೂ "ಅಲ್ಲಾಹು ಅಕ್ಟರ್" ಎಂದು ಘೋಷಣೆಗಳನ್ನು ಕೂಗುತ್ತಿರುವುದು ಕೇಳಿಬಂದಿದೆ.
'ನಾವು ಆತನ ಸಿದ್ಧಾಂತವನ್ನು ಸರಿಪಡಿಸಲು ಬಯಸುತ್ತೇವೆ. ನಾವು ಅವನನ್ನು ಕೋಮಾಕ್ಕೆ ಹೋಗುವ ರೀತಿ ಹೊಡೆಯುತ್ತೇವೆ ಹಾಗೂ ಆತ ಹೊಸ ಜಗತ್ತನ್ನು ನೆನಪಿಸಿಕೊಳ್ಳುತ್ತಾನೆ" ಎಂದು ಆರೋಪಿಯೊಬ್ಬ ಹೇಳುತ್ತಿರುವುದು ವೀಡಿಯೊದಲ್ಲಿ ಕೇಳಿಬಂದಿದೆ.
ಗುಂಪಿನಲ್ಲಿ ಒಬ್ಬಾತ ಬನ್ಸಾಲ್ ಪರ್ಸ್ ಅನ್ನು ಕಸಿದುಕೊಂಡು ಇನ್ನೊಬ್ಬನಿಗೆ "ನಿಮಗೆ ಬೇಕಾದಷ್ಟು ಹಣ ತೆಗೆದುಕೊಳ್ಳಿ” ಎಂದು ಹೇಳುತ್ತಾನೆ. ನವೆಂಬರ್ 1 ರಂದು ಈ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವ್ಯಾಪಕವಾಗಿ ವೈರಲ್ ಆಗಿದೆ.
ಕೊಲೆ ಯತ್ನದ ಆರೋಪದ ಮೇಲೆ ಅಪ್ರಾಪ್ತ ವಯಸ್ಕ ಸೇರಿದಂತೆ ಒಟ್ಟು 12 ವಿದ್ಯಾರ್ಥಿಗಳ ಪೈಕಿ ಎಂಟು ಮಂದಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಪ್ರಕರರಣದಲ್ಲಿ ಭಾಗಿಯಾಗಿದ್ದ 7 ಮಂದಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿತ ವಿದ್ಯಾರ್ಥಿಗಳನ್ನು ಬಿಸಿನೆಸ್ ಸ್ಕೂಲ್ ತಮ್ಮ ಕಾಲೇಜಿನಿಂದ ಅಮಾನತುಗೊಳಿಸಿದೆ. ಹಾಗೆ, ಕಾಲೇಜಿನ ಆಡಳಿತ ಮಂಡಳಿಯು ಐವರಿಗೆ ಪೊಲೀಸರ ಮುಂದೆ ಹಾಜರಾಗುವಂತೆ ಆದೇಶವನ್ನೂ ನೀಡಿದೆ.
ನವೆಂಬರ್ 1 ರಂದು ಹಿಮಾಂಕ್ ಬನ್ಸಾಲ್, ಪ್ರವಾದಿ ಮೊಹಮ್ಮದ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡಿದದ್ದ. ಈ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಅಲ್ಲದೆ, ಪೊಲೀಸರಿಗೆ ದೂರು ನೀಡಿದ್ದ ವಿದ್ಯಾರ್ಥಿ ತನ್ನ ಮೇಲೆ ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಹಾಗೆ, ಪ್ಯಾಂಟ್ ತೆಗೆಯದಿದ್ದರೆ ಥಳಿಸಿ ಸಾಯಿಸುವುದಾಗಿ ವಿದ್ಯಾರ್ಥಿಗಳು ಬೆದರಿಕೆ ಹಾಕಿದ್ದಾರೆ ಎಂದೂ ದೂರಿನಲ್ಲಿ ಕಾನೂನು ವಿದ್ಯಾರ್ಥಿ ಆರೋಪಿಸಿದ್ದಾನೆ.