ಮಂಗಳೂರು: ಪ್ರತಿಭಾ ಕುಳಾಯಿ ನಿಂದನೆ ಪ್ರಕರಣದ ಆರೋಪಿ ಶ್ಯಾಮ ಸುದರ್ಶನ್ ಭಟ್ ಗೆ ನ.9ರವರೆಗೆ ನಿರೀಕ್ಷಣಾ ಜಾಮೀನು
ಮಂಗಳೂರು: ಸುರತ್ಕಲ್ ಟೋಲ್ ಗೇಟ್ ತೆರವು ಮಾಡಬೇಕೆಂದು ಆಗ್ರಹಿಸಿ ಹೋರಾಟ ಮಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿಯವರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿರುವ ಆರೋಪಿ ಶ್ಯಾಮ ಸುದರ್ಶನ ಭಟ್‌ಗೆ ಕೋರ್ಟ್ ನ .9ರವರೆಗೆ ನಿರೀಕ್ಷಣಾ ಜಾಮೀನು ನೀಡಿದೆ.
ಈ ಪ್ರಕರಣದ ಇನ್ನೋರ್ವ ಆರೋಪಿ ಕೆ.ಆರ್.ಶೆಟ್ಟಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾನೆ. ಟೋಲ್ ಗೇಟ್ ಅನ್ನು ತೆರವು ಮಾಡಬೇಕೆಂದು ಅ.18ರಂದು ನಡೆದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಪ್ರತಿಭಾ ಕುಳಾಯಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಕೆ.ಆರ್.ಶೆಟ್ಟಿ ಇದಕ್ಕೆ ಸೂಕ್ತ ಶೀರ್ಷಿಕೆ ಕೊಡುವಂತೆ ಬರೆದಿದ್ದ. ಇದಕ್ಕೆ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಎಂಬಾತ ಅವಹೇಳನಕಾರಿಯಾಗಿ ಪ್ರತಿಕ್ರಿಯಿಸಿದ್ದಾನೆ. ಈ ಬಗ್ಗೆ ಪ್ರತಿಭಾ ಕುಳಾಯಿ ಪೊಲೀಸ್ ಕಮಿಷನರ್‌ಗೆ ದೂರು ನೀಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು.
ಅಲ್ಲದೆ ಆರೋಪಿಗಳ ವಿರುದ್ಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ಸೆಷನ್ಸ್ ಕೋರ್ಟ್ ಗೆ ನಿರೀಕ್ಷಣಾ ಜಾಮೀನಿಗೆ ಮೊರೆ ಹೋಗಿದ್ದು, ನ್ಯಾಯಾಲಯ ನ.9ರವರೆಗೆ ಆರೋಪಿಯನ್ನು ಪೊಲೀಸರು ಬಂಧಿಸದಂತೆ ನಿರೀಕ್ಷಣಾ ಜಾಮೀನು ನೀಡಿದೆ .