ಬಿಎಂಟಿಸಿ ಬಸ್ ಹರಿದು ಬಾಲಕಿ ಮೃತ್ಯು: ತಾಯಿ - ಮಗನಿಗೆ ಗಂಭೀರ ಗಾಯ
Tuesday, November 22, 2022
ಬೆಂಗಳೂರು: ಬಿಎಂಟಿಸಿ ಬಸ್ ಹರಿದು 15 ವರ್ಷದ ಬಾಲಕಿ ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಪ್ರಿಯದರ್ಶಿನಿ ಎಂಬವರ ಪುತ್ರಿ ಲಾವ್ಯಾಶ್ರೀ(15) ಮೃತಪಟ್ಟ ದುರ್ದೈವಿ. ಘಟನೆಯಲ್ಲಿ ಪ್ರಿಯದರ್ಶಿನಿ ಹಾಗೂ ಅವರ ಪುತ್ರ ಯಾಶ್ವಿನ್ ಗಂಭೀರವಾಗಿ ಗಾಯಗೊಂಡವರು.
ಪ್ರಿಯದರ್ಶಿನಿ ಪುತ್ರಿ ಲಾವ್ಯಾಶ್ರೀ ಮತ್ತು ಪುತ್ರ ಯಾಶ್ವಿನ್‌ರನ್ನು ದ್ವಿಚಕ್ರ ವಾಹನದಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದರು. ಟಿಸಿ ಪಾಳ್ಯಯಿಂದ ಭಟ್ಟರಹಳ್ಳಿ ಹೋಗುವ ಮಾರ್ಗದಲ್ಲಿ ಭಟ್ಟರಹಳ್ಳಿ ಸಿಗ್ನಲ್ ಬಳಿ ದ್ವಿಚಕ್ರ ವಾಹನ ಸ್ಕಿಡ್ ಆಗಿದೆ. ಎಡಗಡೆಗೆ ತಾಯಿ ಹಾಗೂ ಪುತ್ರ ಬಿದ್ದಿದ್ದರೆ, ಬಲಗಡೆಗೆ ಬಿದ್ದ ಬಾಲಕಿ ಲಾವ್ಯಶ್ರೀ ಬಿದ್ದಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಬಿಎಂಟಿಸಿ ಬಸ್ ಆಕೆಯ ಮೇಲೆಯೇ ಹರಿದಿದೆ. ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.
ಬಾಲಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಿಯದರ್ಶಿನಿ ಅವರೂ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.