ಮಂಗಳೂರು: ಆಟೋರಿಕ್ಷಾದಲ್ಲಿ ಸ್ಪೋಟ ಪ್ರಕರಣದ ಆರೋಪಿ ಉಗ್ರ ಪರ ಗೋಡೆ ಬರಹ ಬರೆದ ಶಾರೀಕ್; ದೃಢಪಡಿಸಿದ ಎಡಿಜಿಪಿ
Monday, November 21, 2022
ಮಂಗಳೂರು: ನಗರದ ಗರೋಡಿಯಲ್ಲಿ ಆಟೋರಿಕ್ಷಾದಲ್ಲಿ ನಡೆದಿರುವ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪತ್ತೆಯಾಗಿರುವ ಆರೋಪಿ ಅಂತರಾಷ್ಟ್ರೀಯ ಉಗ್ರ ಸಂಘಟನೆಯ ಒಲವು ಹೊಂದಿದ್ದ, ಉಗ್ರರ ಪರ ಗೋಡೆ ಬರಹ ಬರೆದಿದ್ದ ಶಾರೀಕ್ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನವೆಂಬರ್ 19 ರಂದು ಸಂಜೆ ನಾಗೂರಿಯಿಂದ ಪಂಪವೆಲ್ ಕಡೆಗೆ ಹೋಗುತ್ತಿದ್ದ ಆಟೋರಿಕ್ಷಾದಲ್ಲಿ ಏಕಾಏಕಿ ಭಾರೀ ಪ್ರಮಾಣದ ಸ್ಪೋಟ ಕೇಳಿ ಬಂದಿದ್ದು, ಬೆಂಕಿಯೂ ದಟ್ಟವಾಗಿ ಹೊಗೆ ಕಾಣಿಸಿಕೊಂಡಿತ್ತು. ಈ ಸ್ಪೋಟ ಪ್ರಯಾಣಿಕನ ಚೀಲದಲ್ಲಿದ್ದ ವಸ್ತುವಿನಿಂದಲೇ ಸಂಭವಿಸಿತ್ತು. ಪರಿಣಾಮ ಆಟೋರಿಕ್ಷಾದಲ್ಲಿ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕನಿಗೆ ಹಾಗೂ ಆಟೋ ಚಾಲಕನಿಗೆ ಸುಟ್ಟ ಗಾಯವಾಗಿತ್ತು. ಆಟೋ ಚಾಲಕ ಕೆ ಪುರುಷೋತ್ತಮ ಪೂಜಾರಿ (60) ನೀಡಿದ ದೂರಿನಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಬಳಿಕ ಗಾಯಾಳು ರಿಕ್ಷಾ ಚಾಲಕ ಹಾಗೂ ಆರೋಪಿಯನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಪೊಲೀಸರು ಆಟೋರಿಕ್ಷಾವನ್ನು ಪರಿಶೀಲನೆ ನಡೆಸಿದಾಗ ಕುಕ್ಕರ್, ಎಲೆಕ್ಟ್ರಿಕ್ ವೈರ್, ರಾಸಾಯನಿಕ ಹುಡಿ, ಬ್ಯಾಟರಿಗಳು ಪತ್ತೆಯಾಗಿತ್ತು. ಬಳಿಕ ಆರೋಪಿ ಬಳಿಯಿದ್ದ ಆಧಾರ್ ಕಾರ್ಡ್ ನಲ್ಲಿ ಪ್ರೇಮರಾಜ್ ಎಂಬ ಹೆಸರಿತ್ತು. ಅದರಲ್ಲಿನ ವಿಳಾಸದ ಮೂಲ ಹುಡುಕಾಡಿದಾಗ ಆತ ಹುಬ್ಬಳ್ಳಿ ಮೂಲದ ಒಂದು ಕುಟುಂಬಕ್ಕೆ ಸೇರಿದವನಾಗಿತ್ತು. ಆದರೆ ಅಲ್ಲಿದ್ದ ಪ್ರೇಮರಾಜ್ ಕೆಲವು ತಿಂಗಳ ಹಿಂದೆ ಆಧಾರ್ ಕಾರ್ಡನ್ನು ಕಳೆದುಕೊಂಡಿರುವುದಾಗಿ ತಿಳಿದು ಬಂದಿದೆ. ಆಟೋರಿಕ್ಷಾದಲ್ಲಿ ಬ್ಲಾಸ್ಟ್ ಪ್ರಕರಣದ ಆರೋಪಿ ಈ ಆಧಾರ್ ಕಾರ್ಡ್‌ನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ ಇದರಿಂದ ಖಚಿತವಾಗಿತ್ತು.
ಆರೋಪಿಯಿಂದ ವಶಪಡಿಸಿಕೊಂಡ ಮೊಬೈಲ್‌ನಿಂದ ಹಾಗೂ ಆರೋಪಿತನ ಕುಟುಂಬದವರು ಆರೋಪಿತನನ್ನು ಗುರುತಿಸಿರುವುದರಿಂದ ಆರೋಪಿಯನ್ನು ಮೊಹಮ್ಮದ್ ಶಾರೀಕ್(24) ಎಂದು ತಿಳಿದು ಬಂದಿದೆ. ಈತನ ಮೇಲೆ ಮಂಗಳೂರಿನ ಪೂರ್ವ ಮತ್ತು ಉತ್ತರ ಪೊಲೀಸ್ ಠಾಣೆ ಹಾಗೂ ಶಿವಮೊಗ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ತಿಳಿಸಿದ್ದಾರೆ.
2020 ನವೆಂಬರ್ 27 ರಂದು ಕದ್ರಿ ಠಾಣಾ ವ್ಯಾಪ್ತಿಯಲ್ಲಿ ಉಗ್ರ ಪರ ಗೋಡೆ ಬರಹ ಬರೆಯಲಾಗಿತ್ತು. ನವೆಂಬರ್ 28 ರಂದು ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಕೋರ್ಟ್ ರಸ್ತೆಯಲ್ಲಿ ಉಗ್ರ ಪರ ಗೋಡೆ ಬರಹ ಬರೆಯಲಾಗಿತ್ತು. ಈ ಮೇಲಿನ ಎರಡು ಪ್ರಕರಣದಲ್ಲಿ ದಸ್ತಗಿರಿಯಾಗಿ ಜಾಮೀನಿನ ಮೇಲೆ ಮೂವರು ಆರೋಪಿಗಳು ಬಿಡುಗಡೆ ಹೊಂದಿದ್ದರು. 2022 ಸೆ.19 ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ UNLAWFUL ACTIVITIES PREVENTION ACT 1967 ಪ್ರಕರಣದಲ್ಲಿ ಶಾರೀಕ್ 1ನೇ ಆರೋಪಿಯಾಗಿರುತ್ತಾನೆ. ಪ್ರಕರಣ ದಾಖಲಾದ ಬಳಿಕ ಆತ ಅಲ್ಲಿಂದ ತಲೆಮರೆಸಿಕೊಂಡು ಮೈಸೂರಿನಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದನು ಎಂದರು.
2022 ನ.19 ರಂದು ಮೈಸೂರಿನಿಂದ ಹೊರಟು ಹುಣಸೂರು, ಮಡಿಕೇರಿ, ಬಿ.ಸಿ.ರೋಡ್ ಮೂಲಕ ಮಂಗಳೂರು ಹೊರವಲಯದಲ್ಲಿ ಬಸ್ಸಿನಿಂದ ಇಳಿದು ನಂತರ ಆಟೋದಲ್ಲಿ ಪಂಪವೆಲ್ ಕಡೆಗೆ ಹೋಗುತ್ತಿದ್ದಾಗ ಕುಕ್ಕರ್ ಬಾಂಬ್ ಸ್ಪೋಟ ನಡೆದಿದೆ. ಅದಕ್ಕಿಂತಲೂ ಒಂದು ವಾರದ ಮೊದಲು ಆರೋಪಿ ಮಂಗಳೂರಿನ ಕೆಲ ಪ್ರದೇಶಗಳಲ್ಲಿ ಸುತ್ತಾಡಿ ಹೋಗಿದ್ದ ಎಂಬ ಮಾಹಿತಿ ತನಿಖೆಯಿಂದ ತಿಳಿದು ಬಂದಿದೆ.
ಮೈಸೂರಿನಲ್ಲಿ ಆರೋಪಿ ಶಾರೀಕ್ ಇದ್ದ ಬಾಡಿಗೆ ನಿವಾಸದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆತನ ಮನೆಯಲ್ಲಿ ಸಲ್ಪೆಕ್ಸ್ ಸಲ್ಫರ್ ಪೌಡರ್, ನೆಟ್ ಬೋಲ್ಟ್ ಗಳು, ಸರ್ಕ್ಯೂಟ್‌ಗಳು, ಮಲ್ಟಿ ಫಂಕ್ಷನ್ ಡಿಲೆ ಟೈಮರ್, ಡ್ರೈಂಡರ್, ಮಿಕ್ಸರ್, 150 ಮ್ಯಾಚ್ ಬಾಕ್ಸ್ ಗಳು, ಬ್ಯಾಟರಿ, ಮೈಕ್ಯಾನಿಕಲ್ ಟೈಮರ್, ಆಧಾರ್ ಕಾರ್ಡ್, ಅಲ್ಯೂಮಿನಿಯಂ ಫೈಲ್ ಸಿಮ್ ಕಾರ್ಡ್‌ಗಳು, ಮೊಬೈಲ್‌ನ ಡಿಸ್‌ಫ್ಲೆಗಳು, ಸ್ಫೋಟಕಕ್ಕೆ ಬಳಸುವ ವಿವಿಧ ಬಗೆಯ ಕೆಮಿಕಲ್ಸ್ ಲಭ್ಯವಾಗಿತ್ತು. ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಗುಣಮುಖನಾದ ಬಳಿಕ ಆತನನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ಮಾಡಲಾಗುವುದು. ಈ ಪ್ರಕರಣದ ತನಿಖೆಯನ್ನು ಮಂಗಳೂರು ಕೇಂದ್ರ ಉಪವಿಭಾಗ ಎಸಿಪಿ ಪರಮೇಶ್ವರ ಹೆಗಡೆರವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಈ ವರೆಗೆ ನಡೆಸಿದ ತನಿಖೆಯಿಂದ, ಸ್ಫೋಟ ನಡೆದ ಸ್ಥಳದ ಪರಿಶೀಲನೆ ವೇಳೆ ಸಿಕ್ಕ ವಸ್ತುಗಳು ಹಾಗೂ ಈ ವರೆಗೆ ಸಂಗ್ರಹಿಸಿದ ಸಾಕ್ಷ್ಯದಾರದ ಮೇಲೆ UAPA Act ಹಾಗೂ ಆಧಾರ್ ಕಾರ್ಡ್‌ನ್ನು ನಕಲಿ ಮಾಡಿದ ಕುರಿತು ಪೋರ್ಜರಿ ಕಲಂಗಳನ್ನು ಅಳವಡಿಸಿ ತನಿಖೆ ಮುಂದುವರಿಸಲಾಗಿದೆ. ಮಂಗಳೂರು ನಗರದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ಹಾಗೂ ಶಿವಮೊಗ್ಗ, ಮೈಸೂರು ಪೊಲೀಸ್ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳು ತನಿಖೆಯಲ್ಲಿ ಸಹಕರಿಸುತ್ತಿವೆ ಎಂದರು.
ಇಂದು ಮುಂಜಾನೆ ಶಿವಮೊಗ್ಗದ 4 ಕಡೆ ಮಂಗಳೂರಿನ 1 ಕಡೆ ಹಾಗೂ ಮೈಸೂರಿನ 2 ಕಡೆ ಒಟ್ಟು ರಾಜ್ಯದ 7 ಕಡೆಗಳಲ್ಲಿ ದಾಳಿ ನಡೆಸಿ ಶೋಧಕಾರ್ಯ ಮುಂದುವರಿಸಲಾಗಿದೆ. ಮಂಗಳೂರಿನಿಂದ ಒಬ್ಬರು, ಊಟಿಯಿಂದ ಒಬ್ಬರು ಮತ್ತು ಮೈಸೂರಿನಿಂದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಕೊಂಡೊಯ್ಯುವಾಗ ಸ್ಪೋಟವಾಗಿರುವ ಪರಿಣಾಮ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಬಾಂಬ್ ಬ್ಲಾಸ್ಟ್ ಆಗುತ್ತಿದ್ದರೆ ಕರಾವಳಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತಿತ್ತು.
ಆರೋಪಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ಆ ಬಳಿಕವೇ ಆತ ಮಾತನಾಡುವಷ್ಟು ಶಕ್ತನಾಗನಿದ್ದಾನೆ. ಆ ಬಳಿಕ ಆತನ ವಿಚಾರಣೆ ನಡೆಸಲಾಗುತ್ತದೆ. ಆಟೋ ಡ್ರೈವರ್ ಪುರುಷೋತ್ತಮ್ ಅವರಿಗೂ ಪರಿಹಾರ ಧನವೂ ನೀಡುತ್ತೇವೆ. ಅವರ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಶಾಕೀರ್ ಗೆ ಅಬ್ದುಲ್ ಮತೀನ್ ಜೊತೆಗೆ ಸಂಪರ್ಕವಿತ್ತು. ಅಬ್ದುಲ್ ಮತೀನ್ ಜಾಗತಿಕ ಉಗ್ರ ಸಂಘಟನೆ ಜೊತೆಗೆ ಸಂಪರ್ಕವಿತ್ತು. ಆತನಿಂದಲೇ ಶಾಕೀರ್ ಉಗ್ರ ನಿಲುವಿನತ್ತ ಪ್ರೇರಪಣೆಯಾಗಿದ್ದ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.