ಕನ್ನಡ ರಾಜ್ಯೋತ್ಸವ ಮಾಸಾಚರಣೆ ಪ್ರಯುಕ್ತ ಮನೆಯಂಗಳದಲ್ಲಿ ರಾಜ್ಯೋತ್ಸವ
ಮೂಡುಬಿದಿರೆ: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಪ್ರಯುಕ್ತ ಮನೆಯಂಗಳದಲ್ಲಿ ರಾಜ್ಯೋತ್ಸವ ಹಾಗೂ ಎಲೆಮರೆ ಕಾಯಿಯಂತಿರುವ ನುಡಿ ಪ್ರಚಾರರ ಗೌರವ ಸನ್ಮಾನ ಕರ‍್ಯಕ್ರಮದ ಉದ್ಘಾಟನಾ ಸಮಾರಂಭ ಕೋಡಂಗಲ್ಲು ಮಾರಿಗುಡಿ ಸನಿಹದ ಹುಡ್ಕೋ ಕಾಲನಿಯ ಸುಮಂಗಲಾ ಕಿಣಿಯವರ ಮನೆಯಲ್ಲಿ ಜರುಗಿತು.
ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ, ಯಾವಾಗ ಅನುಭವ ಮೂಲದ್ರವ್ಯವಾಗಿರುತ್ತದೋ, ಅದು ಶಕ್ತವಾಗಿರುತ್ತದೆ. ಒಳಗಿನ ತುಡಿತ ಬರೆಯಲು ಪ್ರೇರೆಪಿಸುತ್ತದೆ. ಸ್ವಾನುಭವ, ಪರಿಶ್ರಮ, ಪರಿಕಲ್ಪನೆ ಬೆರೆತಾಗ ಉತ್ತಮ ಸಾಹಿತ್ಯ ಮೂಡಬಲ್ಲದು ಎಂದರು. ಎಲೆಮರೆಯಲ್ಲಿದ್ದುಕೊಂಡೆ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೆ ನೆಲೆಯಲ್ಲಿ ಕೊಡುಗೆ ನೀಡುತ್ತಾ ಬರುತ್ತಿರುವವರನ್ನು ಗುರುತಿಸಲು ಮುಂದಾಗಿರುವ ಮೂಡುಬಿದಿರೆ ತಾಲೂಕು ಸಾಹಿತ್ಯ ಪರಿಷತ್ತಿನ ಕರ‍್ಯ ನಿಜಕ್ಕೂ ಅಭಿನಂದನಾರ್ಹ ಎಂದರು.
ಕನ್ನಡ ರಾಜ್ಯೋತ್ಸವ ಮಾಸಾಚರಣೆ ಪ್ರಯುಕ್ತ ನುಡಿ ಪ್ರಚಾರರ ಗೌರವ ಸನ್ಮಾನ ಕರ‍್ಯಕ್ರಮದಲ್ಲಿ ಸಾಹಿತಿ ಸುಮಂಗಲಾ ಕಿಣಿಯವರನ್ನು ಅವರ ನಿವಾಸದಲ್ಲಿ ಗೌರವಿಸಲಾಯಿತು. ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ಅವರು, ‘ಮರಾಠಿ ಮಾಧ್ಯಮದಿಂದ ಬಂದು ಇಂದು ಕನ್ನಡ ಸಾಹಿತ್ಯ ಕೃಷಿ ಮಾಡುತ್ತಿರುವುದು ನನಗೆ ಖುಷಿಯ ವಿಚಾರ. ಜೀವನದ ಎಡರು ತೊಡರುಗಳನ್ನು ಮರೆಯಲು ಆರಿಸಿಕೊಂಡಿದ್ದು ಬರವಣಿಗೆ ಕ್ಷೇತ್ರ. ಮೊದಲಿಗೆ ‘ತಾಯಿ’ ಎಂಬ ಕವನ ಪ್ರಕಟಣೆಯಾಗಿ ಬರೆಯುವ ಸ್ಪೂರ್ತಿ ಇಮ್ಮಡಿಯಾಯಿತು. ವರನಟ ಡಾ ರಾಜಕುಮಾರ್ ವ್ಯಕ್ತಿತ್ವದ ಕವನ ಸ್ಪರ್ಧೆಯಲ್ಲಿ ಜಯಗಳಿಸಿದ್ದು ಇನ್ನಷ್ಟು ಬರೆಯಲು ಪ್ರೇರೆಪಿಸಿತು ಎಂದರು.
ಕ.ಸಾ.ಪ.ಮೂಡುಬಿದಿರೆ ತಾಲೂಕು ಘಟಕದ ಗೌರವ ಕಾರ‍್ಯದರ್ಶಿ ಸದಾನಂದ ನಾರಾವಿ ನುಡಿಗೌರವ ಸಲ್ಲಿಸಿದರು.
ಕಾರ‍್ಯಕ್ರಮದಲ್ಲಿ ಕ.ಸಾ.ಪ.ದ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ, ಗೌರವ ಕಾರ‍್ಯದರ್ಶಿಗಳಾದ ಡಾ ಸುಧಾರಾಣಿ, ಕರ‍್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.