
ಸುರತ್ಕಲ್: ಪೇರೆಂಟ್ಸ್ ಮೀಟಿಂಗ್ ವೇಳೆ ಶಾಲಾ ಕೊಠಡಿಯೊಳಗೆ ಶಿಕ್ಷಕಿಗೆ ಹಲ್ಲೆ; ಆರೋಪಿ ಅರೆಸ್ಟ್
Sunday, November 6, 2022
ಸುರತ್ಕಲ್: ಇಲ್ಲಿನ ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿಯ ನೂರ್ ಹುದಾ ಶಿಕ್ಷಣ ಸಂಸ್ಥೆಯ ತರಗತಿಯಲ್ಲಿ ಪೇರೆಂಟ್ಸ್ ಮೀಟಿಂಗ್ ನಡೆಯುತ್ತಿದ್ದ ವೇಳೆ ಯುವಕನೋರ್ವ ಶಿಕ್ಷಕಿಗೆ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ನಡೆದಿದೆ. ಹಲ್ಲೆ ನಡೆಯುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಸುರತ್ಕಲ್ ಠಾಣಾ ಎಸ್ಐ ಪುನೀತ್ ಗಾಂವರ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.
ಮೊಹಮ್ಮದ್ ಹನೀಫ್ ಶಿಕ್ಷಕಿ ಮೇಲೆ ಹಲ್ಲೆ ನಡೆಸಿದ ಆರೋಪಿ.
ನೂರ್ ಹುದಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಚಂದ್ರಕಲಾ ಪರಿಚಯದ ನೆಲೆಯಲ್ಲಿ ಆರೋಪಿ ಹನೀಫ್ ಪತ್ನಿಗೆ ಸಾಲ ನೀಡಿದ್ದರು. ಆದರೆ ಆಕೆ ಅದನ್ನು ಹಿಂತಿರುಗಿಸಿರಲಿಲ್ಲ. ಹಣದ ಅವಶ್ಯಕತೆ ಇದ್ದುದರಿಂದ ಚಂದ್ರಕಲಾ ಹಣ ಹಿಂದಿರುಗಿಸುಂತೆ ಕೇಳುತ್ತಿದ್ದರು. ಹನೀಫ್ ವಿದೇಶದಲ್ಲಿ ವೃತ್ತಿ ನಿರ್ವಹಿಸುತ್ತಿದ್ದು ಕಳೆದ ಎರಡು ದಿನಗಳ ಹಿಂದಯಷ್ಟೇ ಊರಿಗೆ ಮರಳಿದ್ದ.
ಶುಕ್ರವಾರ ಶಾಲೆಯಲ್ಲಿ ಪೇರೆಂಟ್ಸ್ ಮೀಟಿಂಗ್ ಇತ್ತು. ಈ ವೇಳೆ ಚಂದ್ರಕಲಾ ಹಾಗೂ ಹನೀಫ್ ಪತ್ನಿಯ ನಡುವೆ ಜಗಳ ನಡೆದಿದೆ. ಆದರೆ ಚಂದ್ರಕಲಾ ಮಾತಿನ ಭರದಲ್ಲಿ ಅವರ ಪುಟ್ಟ ಮಗುವಿನ ಬಗ್ಗೆ ಮಾತಾಡಿದರೆಂಬ ಕೋಪದಲ್ಲಿ ಹನೀಫ್ ಏಕಾಏಕಿ ಶಾಲಾ ಕೊಠಡಿಯಲ್ಲೇ ಶಿಕ್ಷಕಿ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಚಂದ್ರಕಲಾ ಕೈಗೆ ಬಲವಾಗಿ ಪೆಟ್ಟು ಬಿದ್ದಿದ್ದು ಅವರನ್ನು ಪದ್ಮಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಹನೀಫ್ ವಿರುದ್ಧ ಮಹಿಳಾ ದೌರ್ಜನ್ಯ , ಹಲ್ಲೆ ಮತ್ತಿತರ ಸೆಕ್ಷನ್ ನಡಿಯಲ್ಲಿ ಪ್ರಕರಣ ದಾಖಲಾಗಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಪೊಲೀಸ್ ವಶಕ್ಕೆ ನೀಡಿದೆ.