ಸಾಲಗಾರರ ಕಾಟದಿಂದ ಬೇಸತ್ತು ಪುತ್ರಿಯನ್ನು ಹತ್ಯೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ ಅರೆಸ್ಟ್
Sunday, November 27, 2022
ಬೆಂಗಳೂರು: ಸಾಲಗಾರರ ಕಿರುಕುಳದಿಂದ ಬೇಸತ್ತ ಟೆಕ್ಕಿ ತನ್ನ ಎರಡುವರೆ ವರ್ಷದ ಪುತ್ರಿಯನ್ನು ಕೈಯಾರೆ ಕೊಂದು ತಾನೂ ಆತ್ಮಹತ್ಯೆ ಪ್ರಯತ್ನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಗುವನ್ನು ಕೊಂದು ಆತ್ಮಹತ್ಯೆಗೆ ಪ್ರಯತ್ನಿಸಿದಾತ ರಾಹುಲ್ ಪರಮಾರ್ (45) ಎಂಬ ಟೆಕ್ಕಿ.
"ಪುತ್ರಿ ಅಳಲು ಆರಂಭಿಸಿದಳು. ನನ್ನಲ್ಲಿ ಸ್ವಲ್ಪವೂ ಹಣ ಉಳಿದಿರಲಿಲ್ಲ. ಮನೆಯಲ್ಲಿ ಇನ್ನಷ್ಟು ಹದಗೆಟ್ಟ ಪರಿಸ್ಥಿತಿ ಕಾಯುತ್ತಿತ್ತು. ನಾನು ಆಕೆಯನ್ನು ಬಲವಾಗಿ ತಬ್ಬಿಕೊಂಡು ಸಾಯಿಸಿದೆ. ಆಕೆಗಾಗಿ ಆಹಾರ ಖರೀದಿಸಲೂ ಹಣ ಇಲ್ಲದ ಅಸಹಾಯಕ ಸ್ಥಿತಿ ನನ್ನನ್ನು ಈ ನಿರ್ಧಾರ ಕೈಗೊಳ್ಳುವಂತೆ ಮಾಡಿತು. ನಾನು ಆಕೆಯೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದೆ. ಆದರೆ ಮುಳುಗಲಿಲ್ಲ" ಎಂದು ಆರೋಪಿ ರಾಹುಲ್ ಪರಮಾರ್ ಹೇಳಿಕೊಂಡಿದ್ದಾನೆ.
ಇದೀಗ ಪುತ್ರಿ ಜಿಯಾಳನ್ನು ಕೊಂದು ಮೃತದೇಹವನ್ನು ಬೆಂಗಳೂರು ಕೋಲಾರ ಹೆದ್ದಾರಿಯ ಕೆಂಡತ್ತಿ ಬಳಿ ಕೆರೆಗೆ ಎಸೆದ ಆರೋಪದಲ್ಲಿ ರಾಹುಲ್‌ನನ್ನು ಬಂಧಿಸಲಾಗಿದೆ. ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದ ಪೊಲೀಸರು ಮಹಜರು ನಡೆಸಿದರು. ರಾಹುಲ್‌ಗೆ ತನ್ನ ನಿರ್ಧಾರದ ಬಗ್ಗೆ ತೀವ್ರ ಬೇಸರವಿದೆ. ಆದರೆ ತನ್ನ ಮುಂದೆ ಬೇರೆ ಯಾವುದೇ ಆಯ್ಕೆಗಳಿರಲಿಲ್ಲ ಎಂದು ಆತ ಹೇಳಿಕೊಂಡಿದ್ದಾಗಿ ಪೊಲೀಸರು ವಿವರಿಸಿದ್ದಾರೆ.
ಪುತ್ರಿಯನ್ನು ಶಾಲೆಗೆ ಕರೆದೊಯ್ದ ರಾಹುಲ್ ನವೆಂಬರ್ 15ರಂದು ನಾಪತ್ತೆಯಾಗಿದ್ದರು. ಪತ್ನಿ ಭವ್ಯ ಈ ಬಗ್ಗೆ ಪುತ್ರಿ ಹಾಗೂ ಪತಿ ನಾಪತ್ತೆ ದೂರು ದಾಖಲಿಸಿದ್ದರು. ಮರುದಿನ ಮುಂಜಾನೆ ಜಿಯಾ ದೇಹ ಕೆರೆಯಲ್ಲಿ ತೇಲುತ್ತಿತ್ತು ಹಾಗೂ ರಾಹುಲ್ ಕೂಡಾ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದರು.
ಉದ್ಯೋಗ ಕಳೆದುಕೊಂಡಿದ್ದ ರಾಹುಲ್, ಬಿಟ್‌ಕಾಯಿನ್ ವ್ಯವಹಾರದಲ್ಲಿ ನಷ್ಟ ಅನುಭವಿಸಿ, ಸುಳ್ಳು ಡಕಾಯಿತಿ ಪ್ರಕರಣ ದಾಖಲಿಸಿದ್ದಕ್ಕಾಗಿ ಪೊಲೀಸ್ ವಿಚಾರಣೆಗೂ ಗುರಿಯಾಗಿದ್ದ. ಪತ್ನಿಯ ಚಿನ್ನವನ್ನು ಅಡವಿಟ್ಟು, ಆಭರಣಗಳು ಕಳ್ಳತನವಾಗಿದೆ ಎಂದು ಹೇಳಿದ್ದ. ಪುತ್ರಿಯನ್ನು ಅತೀವವಾಗಿ ಹಚ್ಚಿಕೊಂಡಿದ್ದ ಆತ ಪಡೆದ ಸಾಲವನ್ನು ತೀರಿಸಲಾಗದೇ ಈ ನಿರ್ಧಾರಕ್ಕೆ ಬಂದ ಎಂದು ಪೊಲೀಸರು ಹೇಳಿದ್ದಾರೆ.