
ಮಂಗಳೂರಿನ ಮೊತ್ತಮೊದಲ ಆಟೊಚಾಲಕ ಕುಡ್ಲದ 'ಆಟೋ ರಾಜ' ಖ್ಯಾತಿಯ ಮೋಂತು ಲೋಬೊ ಇನ್ನಿಲ್ಲ
Saturday, November 5, 2022
ಮಂಗಳೂರು: ಕುಡ್ಲದ 'ಆಟೋ ರಾಜ' ಎಂದು ಖ್ಯಾತರಾಗಿದ್ದ ಮಂಗಳೂರಿನ ಮೊದಲ ಲೈಸೆನ್ಸ್ ಹೊಂದಿದ್ದ ಆಟೋ ಚಾಲಕ ಮೋಂತು ಲೋಬೊ ಅಲ್ಪಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಮಂಗಳೂರು ನಗರದ ವೆಲೆನ್ಸಿಯಾ ಬಳಿಯ ಸ್ವಗೃಹದಲ್ಲಿ ಮೋಂತು ಲೋಬೊ(86) ಕೊನೆಯುಸಿರೆಳೆದಿದ್ದಾರೆ. ಅಚ್ಚರಿಯ ವಿಚಾರವೆಂದರೆ ತಮ್ಮ ಕೊನೆಯ ದಿನಗಳವರೆಗೂ ಮೋಂತು ಲೋಬೋ ಅವರು ಆಟೋ ಓಡಿಸ್ತಿದ್ದರು. ಇವತ್ತು ಮಂಗಳೂರಿನಲ್ಲಿ ಆಟೋ ಓಡಿಸುವ ಯಾವ ಆಟೋ ಚಾಲಕನಿಗೂ ಇವರ ಲೈಸೆನ್ಸ್ ನಷ್ಟೂ ವಯಸ್ಸಾಗಿಲ್ಲವಂತೆ. ತಮ್ಮ 20ನೇ ವಯಸ್ಸಿನಲ್ಲೇ ಆಟೋ ಓಡಿಸಲು ಆರಂಭಿಸಿರುವ ಮೋಂತು ಲೋಬೋ ಅವರು ಆಟೋ ಓಡಿಸಲು ಆರಂಭಿಸಿ ಬರೋಬ್ಬರಿ 66 ವರ್ಷವಾಯಿತು. ಅಂದರೆ ಇವರು ತಮ್ಮ ಕೊನೆಯ ದಿನಗಳವರೆಗೂ ಆಟೋ ಓಡಿಸಿದ್ದರು.
1935ರಲ್ಲಿ ಮಂಗಳೂರಿನಲ್ಲಿ ಜನಿಸಿದ ಮೋಂತು ಲೋಬೋ ಆರನೇ ತರಗತಿ ವ್ಯಾಸಂಗ ಮಾಡಿದ್ದರು. ಇದಾದ ಬಳಿಕ ಇವರು ಲ್ಯಾಂಬ್ರೆಟ್ಟಾ ಆಟೋ ರಿಕ್ಷಾದಲ್ಲಿ ತಮ್ಮ ಮೊತ್ತಮೊದಲ ಬಾರಿಗೆ ಆಟೊ ಚಾಲನಾ ವೃತ್ತಿ ಆರಂಭಿಸಿದ್ದರು. ಅಚ್ಯುತ ಸಾಲಿಯಾನ್ ಎಂಬವರ ಬಳಿ ಇದ್ದ ಎರಡು ಆಟೋಗಳಲ್ಲಿ ಒಂದನ್ನು ಮೊದಲ ಬಾರಿಗೆ ಮೋಂತು ಲೋಬೋ ಅವರು ಓಡಿಸಲು ಆರಂಭಿಸಿದರು. 1955ರ ಹೊತ್ತಲ್ಲಿ ಮಂಗಳೂರಿನಲ್ಲಿ ಓಡಾಡಿದ ಏಳು ಆಟೋಗಳ ಪೈಕಿ ಮೋಂತು ಲೋಬೋ ಓಡಿಸಿದ ಆಟೋ ಮೊದಲನೆಯದ್ದು.
ಆಗ ರಿಕ್ಷಾಕ್ಕೆ ಕನಿಷ್ಠ ದರ 25 ಪೈಸೆ. ಮಂಗಳೂರಿನ ಹಳೆಯ ಬಸ್ ನಿಲ್ದಾಣದ ಬಳಿ ರಿಕ್ಷಾ ಸ್ಟ್ಯಾಂಡ್ ಇತ್ತು. ಆದರೂ 25 ಪೈಸೆ ಕೊಟ್ಟು ಪ್ರಯಾಣಿಸುವುದು ಆ ಕಾಲದಲ್ಲಿ ಐಷಾರಾಮಿಯಾಗಿತ್ತು. ಅಂದು ಇವರ ಒಂದು ದಿನದ ದುಡಿಮೆ 45-50 ರೂ. ಇದರಲ್ಲಿ ಮಾಲಿಕರಿಗೆ 35 ರೂ. ಕೊಡಬೇಕು. ಆ ಬಳಿಕ 2001ರಲ್ಲಿ ಬ್ಯಾಂಕ್ ಲೋನ್ ಮಾಡಿ ಸ್ವಂತ ಆಟೋ ರಿಕ್ಷಾ ಖರೀದಿಸಿ ಓಡಿಸಲು ಶುರು ಮಾಡಿದ ಮೋಂತು ಲೋಬೋ, ಈವರೆಗೆ 14 ಆಟೋಗಳನ್ನ ಖರೀದಿಸಿ ಮಾರಾಟ ಮಾಡಿದ್ದಾರೆ. ಅಚ್ಚರಿ ಅಂದ್ರೆ ತಮ್ಮ 66 ವರ್ಷಗಳ ಚಾಲನಾ ಬದುಕಿನಲ್ಲಿ ಈವರೆಗೆ ಒಂದೇ ಒಂದು ಅಪಫಾತ ಎಸಗದ ದಾಖಲೆ ಇವರದ್ದು. 40 ಕಿ.ಮೀ ಒಳಗಿನ ವೇಗದಲ್ಲಿ ಆಟೋ ಓಡಿಸೋ ಇವರು ಟ್ರಾಫಿಕ್ ನಿಯಮ ಉಲ್ಲಂಘಿಸಿದ ಇತಿಹಾಸವೇ ಇಲ್ಲ.
ಲೋಬೋರ ಅವರ ಸೇವೆಯನ್ನು ದ.ಕ ಜಿಲ್ಲಾಡಳಿತ, ಆರ್‌ಟಿಒ ಮತ್ತು ಪೊಲೀಸ್ ಇಲಾಖೆ ಗುರುತಿಸಿದೆ. 19 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಸಂದರ್ಭದಲ್ಲಿ ಅವರಿಗೆ ಮಾನ್ಯತೆ ಪ್ರಶಸ್ತಿಯನ್ನು ನೀಡಲಾಗಿದೆ. ಮಂಗಳೂರಿನಲ್ಲಿ 'ಆಟೋ ರಾಜ' ಬಿರುದು ಹಾಗೂ ಬೆಂಗಳೂರಿನಲ್ಲಿ 'ಸಾರಥಿ ನಂಬರ್ 1' ಪ್ರಶಸ್ತಿ ನೀಡಿದ್ದು, ಇನ್ನೂ ಹತ್ತು ಹಲವು ಪ್ರಶಸ್ತಿಗಳು ಸಂದಿವೆ.