ಮಂಗಳೂರು: ಸಂಚಾರದಲ್ಲಿದ್ದ ಆಟೊದೊಳಗಡೆ ಬ್ಲಾಸ್ಟ್: ಸ್ಥಳದಲ್ಲಿ ಆತಂಕದ ಸೃಷ್ಟಿ
Saturday, November 19, 2022
ಮಂಗಳೂರು: ಸಂಚಾರದಲ್ಲಿದ್ದ ಆಟೋರಿಕ್ಷಾದೊಳಗಡೆ ಸ್ಪೋಟವಾಗಿರುವ ಆತಂಕಕಾರಿ ಘಟನೆ ನಗರದ ಕಂಕನಾಡಿ ಪೊಲೀಸ್ ಠಾಣೆಯ ಬಳಿಯ ನಾಗುರಿ ಎಂಬಲ್ಲಿ ನಡೆದಿದೆ.
ಆಟೋದೊಳಗಡೆ ಛಿದ್ರವಾಗಿರುವ ಕುಕ್ಕರ್ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಆಟೋ ಏರಿದ್ದ ಪ್ರಯಾಣಿಕನ ಕೈಯಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. ಆ ಬಳಿಕ ಸ್ಪೋಟವಾಗಿದೆ. ಪರಿಣಾಮ ಪ್ರಯಾಣಿಕ ಹಾಗೂ ಆಟೊ ಚಾಲಕ ಗಾಯಗೊಂಡಿದ್ದಾರೆ.
ನಾಗುರಿ ಎಂಬಲ್ಲಿಂದ ಪಂಪ್ ವೆಲ್ ಕಡೆಗೆ ಆಟೋ ಸಂಚರಿಸುತ್ತಿತ್ತು. ನಾಗುರಿಯಲ್ಲಿ ಆಟೋ ಹತ್ತಿದ ಪ್ರಯಾಣಿಕನ ಕೈಯಲ್ಲಿದ್ದ ಪ್ಲ್ಯಾಸ್ಟಿಕ್ ಬ್ಯಾಗ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಗಾಯಗೊಂಡ ಪ್ರಯಾಣಿಕ ಹಾಗೂ ಆಟೋ ಚಾಲಕನಿಗೆ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಾರ್ವಜನಿಕರು ಆತಂಕಕ್ಕೊಳಗಾಗುವ ಅವಶ್ಯಕತೆಯಿಲ್ಲ. ಈ ಬಗ್ಗೆ ಸಮಗ್ರವಾದ ವಿಚಾರಣೆ ನಡೆಸಲಾಗುತ್ತದೆ. ಬ್ಲಾಸ್ಟ್ ಆಗಿರುವ ಬಗ್ಗೆ ಪ್ರತ್ಯಕ್ಷ ಸಾಕ್ಷಿಗಳು ಏನು ಹೇಳಿಲ್ಲ. ವಿಧಿ ವಿಜ್ಞಾನ ಇಲಾಖೆಯ ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನೀಡಿದ ಬಳಿಕ ಸ್ಪೋಟದ ಮಾಹಿತಿ ತಿಳಿಯಲಿದೆ ಎಂದು ಎನ್.ಶಶಿಕುಮಾರ್ ತಿಳಿಸಿದ್ದಾರೆ.