ಮಂಗಳೂರು: ಆಟೋ ಸ್ಪೋಟದ ಕಾರಣ ನಿಗೂಢ; ಪ್ರಯಾಣಿಕನ ಮೇಲೆ ಅನುಮಾನದ ಬಲ
Sunday, November 20, 2022
ಮಂಗಳೂರು: ನಗರದ ಗರೋಡಿ ಬಳಿ ನಿನ್ನೆ ಸಂಜೆ ವೇಳೆ ಆಟೋದಲ್ಲಿ ನಿಗೂಢ ಸ್ಪೋಟದ ಬಗ್ಗೆ ಪ್ರಯಾಣಿಕನ ಮೇಲೆ ಅನುಮಾನ ವ್ಯಕ್ತವಾಗಿದೆ. ಆದರೆ ಆತನ ಹಿನ್ನಲೆ ಬಗ್ಗೆ ಇನ್ನೂ ಸ್ಪಷ್ಟವಾದ ವಾಹಿತಿ ಲಭ್ಯವಾಗಿಲ್ಲ.
ಪ್ರಯಾಣಿಕ ಉತ್ತರಭಾರತ ಮೂಲದ ಕಾರ್ಮಿಕನಂತಿದ್ದು, ಆತನ ಬಳಿ ಪ್ರೇಮ್ ರಾಜ್ ಕನೋಗಿ ಎಂಬ ಐಡಿ ಕಾರ್ಡ್ ಪತ್ತೆಯಾಗಿದೆ. ಆತನಲ್ಲಿದ್ದ ಬ್ಯಾಗ್ ನಿಂದಲೇ ಈ ಸ್ಪೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸ್ಪೋಟದ ತೀವ್ರತೆಗೆ ರಿಕ್ಷಾದೊಳಗೆ ದಟ್ಟಹೊಗೆ ಕಾಣಿಸಿಕೊಂಡಿತ್ತು. ಅಲ್ಲದೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಪ್ರಯಾಣಿಕನ ದೇಹದ ಅರ್ಧ ಭಾಗದಲ್ಲಿ ಸುಟ್ಟ ಗಾಯವಾಗಿದೆ. ಚಾಲಕನಿಗೂ ಸುಟ್ಟ ಗಾಯಗಳಾಗಿದೆ. ಆಟೋರಿಕ್ಷಾ ಒಳಭಾಗದಲ್ಲಿಯೂ ಹಾನಿಯಾಗಿದೆ.
ಪ್ರಯಾಣಿಕನಲ್ಲಿದ್ದ ಕುಕ್ಕರ್ ನಲ್ಲಿಯೇ ಈ ಸ್ಪೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಸ್ಪೋಟಕ್ಕೆ ಸ್ಪಷ್ಟ ಕಾರಣ ಮಾತ್ರ ಇನ್ನೂ ತಿಳಿದು ಬಂದಿಲ್ಲ. ವಿಧಿ ವಿಜ್ಞಾನ ತಜ್ಞರು ನಿನ್ನೆಯೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಇನ್ನಷ್ಟೇ ಸ್ಪೋಟದ ಕಾರಣ ತಿಳಿಯಬೇಕಿದೆ.
ಆಟೋವನ್ನು ನಿನ್ನೆಯಿಂದ ಸ್ಪೋಟ ನಡೆದ ಸ್ಥಳದಲ್ಲಿ ಶಾಮಿಯಾನ ಹಾಕಿ ಭದ್ರಪಡಿಸಲಾಗಿದೆ. ಇದೀಗ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದು, ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ತಪಾಸಣೆ ನಡೆಸಿದೆ. ಇಂದು ಎಜಿಡಿಪಿ ಅಲೋಕ್ ಕುಮಾರ್ ಮಂಗಳೂರಿಗೆ ಆಗಮಿಸಲಿದ್ದು, ಈಗಾಗಲೇ ಅವರು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದ್ದಾರೆ.