ಚಹಾದಂಗಡಿ ಮುಚ್ಚುತ್ತೇನೆಂದು ಬಿಕ್ಕಿ ಬಿಕ್ಕಿ ಅತ್ತುಕೊಂಡು ವೀಡಿಯೋ ಮಾಡಿದ “ಗ್ರಾಜುವೇಟ್ ಚಾಯಿವಾಲಿʼʼ
Tuesday, November 15, 2022
ಬಿಹಾರ: ತನ್ನ ಚಹಾ ಸ್ಟಾಲ್ ಅನ್ನು ಅಧಿಕಾರಿಗಳು ಮುಚ್ಚಿಸಿರುವ ಕಾರಣ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ತನ್ನ ಅಳಲನ್ನು ತೋಡಿಕೊಂಡಿರುವ ವೀಡಿಯೋ ವೈರಲ್ ಆಗಿದೆ.
ಕಾಮರ್ಸ್ ಪದವೀಧರೆಯಾಗಿರುವ ಪ್ರಿಯಾಂಕಾ ಗುಪ್ತಾ ತನ್ಮ ಪದವಿ ವ್ಯಾಸಂಗದ ಬಳಿಕ ಕೆಲಸಕ್ಕಾಗಿ ಅಲೆದಾಡಿ, ಕೊನೆಗೆ ಯಾವುದೇ ಉದ್ಯೋಗ ದೊರಕದೆ ಕೊನೆಗೆ ಪೊಲೀಸ್ ಕಮೀಷನರ್ ಬಳಿ ಅನುಮತಿ ಪಡೆದು ಟೀ ಸ್ಟಾಲ್ ವೊಂದನ್ನು ತೆರೆಯುತ್ತಾರೆ. ಲೈಸೆನ್ಸ್ ಹಾಗೂ ಇತರ ದಾಖಲೆಗಳೆಲ್ಲವನ್ನು ಹೊಂದಿದ್ದ ಟೀ ಸ್ಟಾಲ್ ಗೆ ಪ್ರಿಯಾಂಕಾ ಗುಪ್ತಾ “ಗ್ರಾಜುವೇಟ್ ಚಾಯಿವಾಲಿʼʼ ಎಂದು ಹೆಸರಿಡುತ್ತಾರೆ.
ಪ್ರಿಯಾಂಕಾ ಗುಪ್ತಾ “ಗ್ರಾಜುವೇಟ್ ಚಾಯಿವಾಲಿʼʼ ಯುವ ಜನತೆಯನ್ನು ಸೆಳೆಯುತ್ತದೆ. ಉತ್ತಮವಾಗಿ ವ್ಯಾಪಾರ ಮಾಡಿಕೊಂಡು ಹೋಗುತ್ತಿದ್ದ ಟೀಸ್ಟಾಲ್ ಅನ್ನು ರಾತ್ರೋರಾತ್ರಿ ಅಧಿಕಾರಿಗಳು ತೆರವು ಮಾಡುತ್ತಾರೆ. ಇದಾದ ಬಳಿಕ ಪ್ರಿಯಾಂಕ ಟೀಸ್ಟಾಲ್ ಗೆ ನಾನಾ ತೊಂದರೆಗಳು ಆರಂಭವಾಗುತ್ತದೆ. ಇದರಿಂದ ಬೇಸತ್ತ ಪ್ರಿಯಾಂಕಾ ಗುಪ್ತ ಸ್ಥಳೀಯ ರಾಜಕೀಯ ಮುಖಂಡರ ಬಳಿ ಮನವಿ ಮಾಡಿ ಟೀಸ್ಟಾಲ್ ಅನ್ನು ಮತ್ತೆ ಅದೇ ಜಾಗದಲ್ಲಿ ಇಡುತ್ತಾರೆ.
ಆದರೆ ಇದೀಗ ಮತ್ತೊಮ್ಮೆ “ಗ್ರಾಜುವೇಟ್ ಚಾಯಿವಾಲಿʼʼ ಸ್ಟಾಲ್ ತೆರವಿಗೆ ಬಿಹಾರದ ಪಾಟ್ನಾ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಇದೀಗ ಪ್ರಿಯಾಂಕಾ ಗುಪ್ತ ಸ್ಥಳವನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನುವ ಕಾರಣ ಕೊಟ್ಟಿದ್ದಾರೆ. ಇದರಿಂದ ಪ್ರಿಯಾಂಕ ಭಾವುಕರಾಗಿ ಅಧಿಕಾರಿಗಳ ವಿರುದ್ಧ, ವ್ಯವಸ್ಥೆಯ ವಿರುದ್ಧ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
“ಇಲ್ಲಿ ಹೆಣ್ಣು ಎಂದರೆ ಅಡುಗೆ ಮನೆಯಲ್ಲಿ ಇರಲು ಲಾಯಕ್ಕು. ಹೆಣ್ಣಿಗೆ ಮುಂದುವರೆಯಲು ಅವಕಾಶವಿಲ್ಲ. ಬಿಹಾರದಲ್ಲಿ ತುಂಬಾ ಕಾರ್ಟ್ ಗಳಿವೆ ( ಅಂಗಡಿ). ಪಾಟ್ನಾದಲ್ಲಿ ಅಕ್ರಮ ಮದ್ಯ ಮಾರಾಟ ಸೇರಿದಂತೆ ಹಲವು ಅಕ್ರಮ ಕೆಲಸಗಳು ನಡೆಯುತ್ತವೆ. ಇಲ್ಲಿ ವ್ಯವಸ್ಥೆ ಜೀವಂತವಾಗಿಲ್ಲ. ಇಲ್ಲಿ ಹೆಣ್ಣೊಬ್ಬಳು ವ್ಯಾಪಾರ ಆರಂಭಿಸಿದರೆ ಅವಳಿಗೆ ಪದೇ ಪದೇ ಅಡ್ಡಗಾಲು ಹಾಕುತ್ತಾರೆ. ಹೆಣ್ಣೆಂದರೆ ಅಡುಗೆ ಮನೆ, ಮನೆ ಕ್ಲೀನ್, ನೆಲ ಒರೆಸು, ಮದುವೆಯಾಗಿ ಮನೆ ಬಿಡು. ಹೆಣ್ಣಿಗೆ ಸ್ವಂತವಾಗಿ ವ್ಯಾಪಾರ ಮಾಡಲು ಅಧಿಕಾರವೇ ಇಲ್ಲ” ಎಂದಿದ್ದಾರೆ.
“ಕಮಿಷನರ್ ಬಳಿ ಅನುಮತಿ ಪಡೆದ ಬಳಿಕವೂ ನನ್ನ ಕಾರ್ಟನ್ನು ಹೇಗೆ ತೆರವು ಮಾಡುತ್ತಾರೆ. ನಾನು ವ್ಯವಸ್ಥೆ ಮುಂದೆ ವಿಫಲಳಾದೆ. ನನ್ನ ಚಹಾದ ಶಾಖೆಯನ್ನು ಆರಂಭಿಸಲು ಅನುಮತಿ ಪಡೆದ ಎಲ್ಲರ ಹಣವನ್ನು ನಾನು ವಾಪಸ್ ಕೊಡುತ್ತೇನೆ. ನಾನು ನನ್ನ ಚಹಾದಂಗಡಿ ಮುಚ್ಚಿ ಮನೆಗೆ ಹೋಗುತ್ತೇನೆ” ಎಂದು ಅಳುತ್ತಲೇ ಪ್ರಿಯಾಂಕ ಮಾತಾನಾಡಿದ್ದಾರೆ.
“ನಗರ್ ನಿಗಮ್ ವ್ಯವಸ್ಥೆಗೆ ಧನ್ಯವಾದಗಳು. ನೀವು ನನ್ನ ಸ್ಥಿತಿಯನ್ನು ತೋರಿಸಿದ್ದೀರಿ. ನೀವು ಮಹಿಳೆಯಾಗಿದ್ದರೆ, ಮನೆಯಲ್ಲಿಯೇ ಇರಿ, ಹೊರಗೆ ಏನನ್ನೂ ಮಾಡುವ ಅಗತ್ಯವಿಲ್ಲ ಏಕೆಂದರೆ ಇದು ಬಿಹಾರ” ಎಂದು ಭಾವುಕರಾಗಿದ್ದಾರೆ.