
'ಭಾರತದ ಉಕ್ಕಿನ ಮನುಷ್ಯ' ಡಾ.ಜಮೈಡ್ ಜೆ ಇರಾನಿ ನಿಧನ
Tuesday, November 1, 2022
ನವದೆಹಲಿ : 'ಭಾರತದ ಉಕ್ಕಿನ ಮನುಷ್ಯ' ಎಂದು ಪ್ರಖ್ಯಾತರಾಗಿದ್ದ ಪದ್ಮಭೂಷಣ ಡಾ.ಜಮೈಡ್ ಜೆ ಇರಾನಿ(86) ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಅ.31ರ ರಾತ್ರಿ 10 ಗಂಟೆಗೆ ಜೆಮ್‌ಶೆಡ್‌ಪುರದ ಟಾಟಾ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ. ಅವರ ನಿಧನದ ಸುದ್ದಿಯನ್ನು ತೀವ್ರ ದುಖಃದಿಂದ ತಿಳಿಸುತ್ತಿದ್ದೇವೆ ಎಂದು ಟ್ವಿಟ್ ಮೂಲಕ ಟಾಟಾ ಸ್ಟೀಲ್ ತಿಳಿಸಿದೆ .
1936ರ ಜೂನ್ 2 ರಂದು ನಾಗುರದಲ್ಲಿ ಜಿಜಿ ಇರಾನಿ ಮತ್ತು ಖೋರ್ಶೆಡ್ ಇರಾನಿ ದಂಪತಿಯ ಪುತ್ರನಾಗಿ ಡಾ.ಜಮೈಡ್ ಜೆ ಇರಾನಿ ಜನಿಸಿದ್ದರು. 1956 ರಲ್ಲಿ ನಾಗುರದ ವಿಜ್ಞಾನ ಕಾಲೇಜಿನಲ್ಲಿ ವಿಜ್ಞಾನ ಪದವಿ ಪೂರ್ಣಗೊಳಿಸಿದ ಇವರು 1958 ರಲ್ಲಿ ನಾಗುರ ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಜೆಎನ್ ಟಾಟಾ ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡ್ ತೆರಳಿ ಶೆಫಿಲ್ಡ್ ವಿವಿಯಲ್ಲಿ ಲೋಹಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಮುಗಿಸಿದರು. 43 ವರ್ಷಗಳ ಕಾಲ ಟಾಟಾ ಸ್ಟೀಲ್‌ನಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ್ದ ಡಾ . ಜಮೈಡ್ ಜೆ ಇರಾನಿ ಅವರು 2011ರ ಜೂನ್‌ನಲ್ಲಿ ಟಾಟಾ ಸ್ಟೀಲ್ ಮಂಡಳಿಯಿಂದ ನಿವೃತ್ತರಾಗಿದ್ದರು.
1990 ರ ದಶಕದ ಆರಂಭದಲ್ಲಿ ಭಾರತದ ಆರ್ಥಿಕ ಉದಾರೀಕರಣದ ಸಮಯದಲ್ಲಿ ಟಾಟಾ ಸ್ಟೀಲ್ ಅನ್ನು ಮುಂಚೂಣಿಯಿಂದ ಮುನ್ನಡೆಸಿದ್ದರು. ಅದೇ ರೀತಿ ಭಾರತದಲ್ಲಿ ಉಕ್ಕಿನ ಉದ್ಯಮದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಟಾಟಾ ಸ್ಟೀಲ್ ಮತ್ತು ಟಾಟಾ ಸನ್ಸ್ , ಇರಾನಿ ಟಾಟಾ ಮೋಟಾರ್ಸ್, ಟಾಟಾ ಟೆಲಿಸರ್ವೀಸಸ್ ಸೇರಿದಂತೆ ಹಲವಾರು ಟಾಟಾ ಗ್ರೂಪ್ ಕಂಪನಿಗಳ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. 1992-93ರಲ್ಲಿ ಭಾರತೀಯ ಕೈಗಾರಿಕಾ ಒಕ್ಕೂಟದ ( CII ) ರಾಷ್ಟ್ರೀಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಡಾ . ಜಮೈಡ್ ಜೆ ಇರಾನಿ ಅವರಿಗೆ ಪತ್ನಿ ಡೈಸಿ ಇರಾನಿ , ಮಕ್ಕಳಾದ ಜುಬಿನ್ , ನಿಲೋಫರ್ ಮತ್ತು ತನಾಜ್ ಇದ್ದಾರೆ.