ಕೈ ನೋವೆಂದು ಕಾಡು ಸೋರೆಕಾಯಿ ಕಷಾಯ ಸೇವಿಸಿ ವ್ಯಕ್ತಿ ಮೃತ್ಯು
ಇಂದೋರ್: ಕೈ ನೋವು ನಿವಾರಣೆಗೆ ಯೂಟ್ಯೂಬ್ ನೋಡಿ ಆಯುರ್ವೇದಿಕ್ ಕಷಾಯ ಮಾಡಿ ಸೇವಿಸಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಖಂದ್ವ ನಗರದಲ್ಲಿ ನಡೆದಿದೆ.
ಖಂದ್ವ ನಗರದ ಸ್ವರ್ಣಭಾಗ್ ಕಾಲನಿ ನಿವಾಸಿ ಧರ್ಮೇಂದ್ರ ಕೊರೋಲೆ (32) ಮೃತಪಟ್ಟ ವ್ಯಕ್ತಿ. ಧರ್ಮೇಂದ್ರ ಚಾಲಕರಾಗಿದ್ದು, ಅಪಘಾತದಿಂದಾಗಿ ಕೈ ನೋವಿನಿಂದ ಬಳಲುತ್ತಿದ್ದರು. ಈ ನೋವು ನಿವಾರಣೆಗೆ ನಾಟಿ ವೈದ್ಯಕೀಯ ಚಿಕಿತ್ಸೆಗಾಗಿ ಯೂಟ್ಯೂಬ್ನಲ್ಲಿ ಜಾಲಡಿದ್ದಾರೆ. ಆಗ ಅವರಿಗೆ ಕಾಡು ಸೋರೆಕಾಯಿ ರಸದ ಔಷಧಿ ಮಾಡುವ ವಿಧಾನದ ವೀಡಿಯೋವೊಂದು ನೋಡಿದ್ದಾರೆ.
ಆ ಬಳಿಕ ಅವರು ಯೂಟ್ಯೂಬ್ ನೋಡಿ ಕಾಡು ಸೋರೆಕಾಯಿ ರಸ ತಯಾರಿಸಿ ಸೇವನೆ ಮಾಡಿದ್ದಾರೆ. ಈ ರಸ ಕುಡಿದ ಸ್ವಲ್ಪ ಸಮಯದಲ್ಲೇ ಧರ್ಮೇಂದ್ರರ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣ ಕುಟುಂಬಸ್ಥರು ಧರ್ಮೇಂದ್ರರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಧರ್ಮೇಂದ್ರ ಮೃತಪಟ್ಟಿದ್ದಾರೆ. ಇನ್ನು ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಧರ್ಮೇಂದ್ರರ ಸಾವಿನ ಕಾರಣ ತಿಳಿದುಬರಲಿದೆ ಎಂದು ಪೋಲಿಸರು ತಿಳಿಸಿದ್ದಾರೆ.