ಎರಡು ವರ್ಷಗಳ ಬಳಿಕ ಹೊಸ ಅವತಾರದೊಂದಿಗೆ ಕಾಣಿಸಿಕೊಂಡ 'ಡ್ರೋನ್ ಪ್ರತಾಪ್': ಬಗೆಬಗೆಯಾಗಿ ಕಾಲೆಳೆದ ನೆಟ್ಟಿಗರು
ಬೆಂಗಳೂರು: ತಾನೊಬ್ಬ ಯುವ ವಿಜ್ಞಾನಿ, ಡ್ರೋನ್ ತಯಾರಿಸಿದ್ದೇನೆ ಎಂದು ಹೇಳಿ ವ್ಯಾಪಕ ಸುದ್ದಿಯಲ್ಲಿದ್ದು, ಬಳಿಕ ವಿವಾದಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಡ್ರೋನ್ ಪ್ರತಾಪ್ 2 ವರ್ಷಗಳ ಬಳಿಕ ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ.
ಡ್ರೋನ್ ತಯಾರಿಸಿದ್ದೇನೆ ಎಂದು ಸುಳ್ಳು ಹೇಳಿ ಪೊಲೀಸ್ ವಿಚಾರಣೆಯನ್ನೂ ಎದುರಿಸಿದ್ದ ಡ್ರೋನ್ ಪ್ರತಾಪ್ ಬಳಿಕ ನಾಪತ್ತೆಯಾಗಿದ್ದರು. ಇದೀಗ ಮತ್ತೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಮತ್ತೇನೋ ನೂತನವಾಗಿ ಪ್ರಾರಂಭಿಸುತ್ತಿದ್ದೇನೆಂದು ಮುನ್ಸೂಚನೆ ನೀಡಿದ್ದಾರೆ. ಟೇಬಲ್ ಮೇಲೊಂದು ಲ್ಯಾಪ್ಲಾಪ್ ಇಟ್ಟುಕೊಂಡಿರುವ ಡ್ರೋನ್ ಪ್ರತಾಪ್ ಅದಕ್ಕೆ ಡಾಟಾ ಕೇಬಲ್ ಅವಳವಡಿಸಿರುವ ಯಾವುದೋ ಒಂದು ಸಾಧನವನ್ನು ತಮ್ಮ ಮುಂದಿಟ್ಟುಕೊಂಡಿದ್ದಾರೆ. ಎರಡು ಕೈಗಳಿಗೆ ಹಳದಿ ಬಣ್ಣದ ಗ್ಲೌಸ್ ಹಾಗೂ ಕಣ್ಣಿಗೆ ಸುರಕ್ಷಿತ ಕನ್ನಡಕ ಧರಿಸಿ, ಒಂದು ಕೈಯಲ್ಲಿ ಸೋಲ್ಡರಿಂಗ್ ಗೇರ್ ಹಿಡಿದು ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
ಟೇಬಲ್ ಮೇಲೆ ಇನ್ನಷ್ಟು ಇಲೆಕ್ಟ್ರಾನಿಕ್ ಉಪಕರಣಗಳಿದ್ದು, ಟೇಬಲ್ನ ಒಂದು ಬದಿಯಲ್ಲಿ ಡ್ರೋನ್ ಕ್ಯಾಮೆರಾದ ಅರ್ಧ ಚಿತ್ರ ಕಾಣುತ್ತದೆ. ಈ ಬಾರಿ ಡ್ರೋನ್ ಪ್ರತಾಪ್ ಯಾವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಿಲ್ಲ. ಆದರೆ, 'ಕೆಟ್ಟ ಜನರು ನಿಮ್ಮ ಜೀವನವನ್ನು ತೊರೆದಾಗ, ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ನಡೆಯಲು ಪ್ರಾರಂಭಿಸುತ್ತವೆ' ಎಂಬ ಅಡಿಬರಹ ನೀಡಿದ್ದಾರೆ.
ಸದ್ಯ ಡ್ರೋನ್ ಪ್ರತಾಪ್ ಹೊಸ ಅವತಾರದ ಫೋಟೋ ಭಾರಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿದ ನೆಟ್ಟಿಗರು ಇನ್ಸ್ಟಾಗ್ರಾಂ ಖಾತೆಯಲ್ಲಿ ಕಾಮೆಂಟ್ ಮೂಲಕ ಕಾಲೆಳೆಯುತ್ತಿದ್ದಾರೆ. 'ಈ ಬಾರಿ ಯಾವ ರಾಕೆಟ್ ಹಾರಿಸ್ತೀರಾ ಅಣ್ಣಾ' ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿ ಕೇಳಿದ್ದಾರೆ. ಮತ್ತೊಬ್ಬರು 'ಅಣ್ಣಾ ಮಿಕ್ಸಿ ರಿಪೇರಿ ಮಾಡುತ್ತಿದ್ದೀರಾ' ಎಂದಿದ್ದಾರೆ. 'ಕಾಗೆ ಪ್ರತಾಪ' ಎಂದು ಇನ್ನೊಬ್ಬ ನೆಟ್ಟಿಗ ವ್ಯಂಗ್ಯವಾಡಿದ್ದಾರೆ. 'ಅಣ್ಣಾ ನನ್ನ ಇಯರ್ ಫೋನ್ನಲ್ಲಿ ಒಂದು ಬದಿ ಕೇಳುತ್ತಿಲ್ಲ, ರಿಪೇರಿ ಮಾಡಿ ಕೊಡು', 'ಸೋಲ್ಡರಿಂಗ್ ಮಾಡೋಕೆ ಈ ರೀತಿಯ ಬಿಲ್ಡಪ್ ಬೇಕಾ?', 'ಅಣ್ಣನ ಮರು ವಿಶ್ವರೂಪ', 'ಬ್ರೊ ತುರ್ತಾಗಿ ಶಿವಮೊಗ್ಗದಿಂದ ವಿಜಯಪುರಕ್ಕೆ ಒಂದು ಬ್ಲಡ್ ಬಾಟಲ್ ಕಳುಹಿಸಬೇಕಿತ್ತು. 10 ನಿಮಷದಲ್ಲಿ ಕಳುಹಿಸಬೇಕು. ನಿಮ್ಮ ಡ್ರೋಣ್ ಕಳುಹಿಸಿ, ನಮಗೆ ಸಹಾಯವಾಗುತ್ತೆ' ಎಂಬಂತಹ ಬಗೆಬಗೆಯ ಕಾಮೆಂಟ್ಗಳ ಮೂಲಕ ಡ್ರೋನ್… ಅಲ್ಲ ಅಲ್ಲ ಕಾಗೆ ಪ್ರತಾಪ್ನನ್ನು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.