ಕೇಂದ್ರದ ವಿದೇಶಾಂಗ ಸಚಿವಾಲಯದ ಕಾರು ಚಾಲಕನಿಂದ ದೇಶ ವಿರೋಧಿ ಕೃತ್ಯ: ಪಾಕಿಸ್ತಾನಿಗಳಿಂದ ಹನಿಟ್ರ್ಯಾಪ್ ಗೊಳಗಾದವ ಅರೆಸ್ಟ್
Friday, November 18, 2022
ನವದೆಹಲಿ: ಹನಿಟ್ರ್ಯಾಪ್ ಗೊಳಗಾಗಿ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ರವಾನಿಸಿ ದೇಶದ್ರೋಹಿ ಕೃತ್ಯದಲ್ಲಿ ತೊಡಗಿದ್ದ ವಿದೇಶಾಂಗ ಸಚಿವಾಲಯದ ಕಾರು ಚಾಲಕನನ್ನು ರಾಷ್ಟ್ರ ರಾಜಧಾನಿಯ ಪೊಲೀಸರು ಬಂಧಿಸಿದ್ದಾರೆ.
ವಿದೇಶಾಂಗ ಸಚಿವಾಲಯದಲ್ಲಿ ಕಾರು ಚಾಲಕನಾಗಿ ವೃತ್ತಿ ನಿರ್ವಹಿಸುತ್ತಿದ್ದ ಶ್ರೀಕೃಷ್ಣನ್ ಎಂಬಾತ ಬಂಧಿತ ಆರೋಪಿ. ಈತ ಹನಿಟ್ರ್ಯಾಪ್‌ಗೆ ಒಳಗಾಗಿ ಪಾಕಿಸ್ತಾನಕ್ಕೆ ದೇಶದ ರಹಸ್ಯ ಮಾಹಿತಿಯನ್ನು ರವಾನಿಸುತ್ತಿದ್ದ ಎಂಬ ಆರೋಪದ ಮೇಲೆ ಆತನನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಪಾಕಿಸ್ತಾನದ ಇಂಟೆಲಿಜೆನ್ಸ್ ಏಜೆನ್ಸಿಯಿಂದ ಹನಿಟ್ರ್ಯಾಪ್‌ಗೆ ಒಳಗಾದ ಶ್ರೀಕೃಷ್ಣನ್, ದೇಶದ ಭದ್ರತೆಗೆ ಸಂಬಂಧಿಸಿದ ಗುಪ್ತ ಮಾಹಿತಿಯನ್ನು ಐಎಸ್‌ಐಗೆ ರವಾನಿಸುತ್ತಿದ್ದ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯುವತಿಯರ ಫೋಟೋ ಹಾಗೂ ವೀಡಿಯೋಗಳನ್ನೂ ಆತನಿಂದ ವಶಪಡಿಸಿಕೊಳ್ಳಲಾಗಿದೆ ಎಂದೂ ಹೇಳಲಾಗುತ್ತಿದೆ.
ಪೊಲೀಸ್ ಹಾಗೂ ಇಂಟೆಲಿಜೆನ್ಸ್ ಏಜೆನ್ಸಿಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ ನಡೆಸುತ್ತಿದ್ದು, ವಿದೇಶಾಂಗ ಸಚಿವಾಲಯದ ಇತರರೂ ಇದರಲ್ಲಿ ಪಾಲ್ಗೊಂಡಿದ್ದಾರೆಯೇ ಎಂಬ ಮಾಹಿತಿಯನ್ನೂ ಕಲೆ ಹಾಕುತ್ತಿದ್ದಾರೆ. ಅದಾಗ್ಯೂ ಸಚಿವಾಲಯದಿಂದ ಈ ಕುರಿತಂತೆ ಅಧಿಕೃತ ಮಾಹಿತಿ ಇನ್ನೂ ಪ್ರಕಟವಾಗಿಲ್ಲ.