ಕಾಂತಾರದ ಪಂಜುರ್ಲಿ ದೈವದ ವೇಷ ಧರಿಸಿ ರೀಲ್ಸ್: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಕ್ಷಮೆಯಾಚಿಸಿದ ಯುವತಿ
ಮಂಗಳೂರು: ಕಾಂತಾರ ಸಿನಿಮಾ ಮಾದರಿಯಂತೆ ತುಳುನಾಡಿನ 'ಪಂಜುರ್ಲಿ' ದೈವದ ವೇಷ ಧರಿಸಿ ರೀಲ್ಸ್ ಮಾಡಿ ಹುಚ್ಚಾಟ ಮಾಡಿದ್ದ ಯುವತಿ ಕೊನೆಗೂ ತನ್ನ ತಪ್ಪಿನ ಅರಿವಾಗಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಗೆ ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆ ಯಾಚನೆ ಮಾಡಿದ್ದಾಳೆ.
ಹೈದರಾಬಾದ್ ಮೂಲದ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ ಈ ಕೃತ್ಯ ಎಸಗಿದವಳು. ಆಕೆ ಕಾಂತಾರ ಸಿನಿಮಾದ ಪಂಜುರ್ಲಿ ದೈವದ ದೃಶ್ಯವನ್ನು ರೀಲ್ಸ್ ಮಾಡಿ ಹುಚ್ಚಾಟ ಮಾಡಿದ್ದಳು. ನಟ್ಟಿಗರು ಆಕೆಯನ್ನು ತರಾಟೆಗೆ ತೆಗೆದುಕೊಂಡು ದೈವಶಾಪ ತಟ್ಟಲಿ ಎಂದು ಹಿಡಿಶಾಪ ಹಾಕಿದ್ದರಿಂದ ಬೆದರಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ತಪ್ಪು ಕಾಣಿಕೆ ಸಲ್ಲಿಸಿದ್ದಾಳೆ. ಬಳಿಕ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಕ್ಷಮೆ ಯಾಚನೆ ಮಾಡಿದ್ದಾಳೆ.
ಶ್ವೇತಾ ರೆಡ್ಡಿ ಪಂಜುರ್ಲಿ ದೈವದಂತೆ ಬಣ್ಣ ಹಚ್ಚಿ ವೇಷ ಧರಿಸಿ ರೀಲ್ಸ್ ಮಾಡಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಳು. ಈ ರೀಲ್ಸ್ ಗೆ ಸಾಮಾಜಿಕ ತಾಣಗಳಲ್ಲಿ ಯುವತಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ನೆಟ್ಟಿಗರಲ್ಲಿ ಕೆಲವರು ಶ್ವೇತಾ ರೆಡ್ಡಿ ವಿರುದ್ಧ ಧರ್ಮಸ್ಥಳ ಮಂಜುನಾಥನೇ ನೋಡಿಕೊಳ್ಳಲಿ ಎಂದು ಹೇಳಿದ್ದರು. ಅಲ್ಲದೆ ದೈವಗಳು ನೋಡಿಕೊಳ್ಳಲೆಂದು ಹರಕೆ ಮಾದರಿ ಎಚ್ಚರಿಕೆ ಸಂದೇಶ ಹಾಕಿದ್ದರು. ಇದಾದ ಬಳಿಕ ಪೋಸ್ಟ್ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದ ಶ್ವೇತಾ ರೆಡ್ಡಿ, ದಯವಿಟ್ಟು ಹರಕೆ ಇಡಬೇಡಿ, ಕ್ಷಮೆ ಕೋರುತ್ತೇನೆ ಎಂದಿದ್ದರು. ದೈವಕ್ಕೆ ಮತ್ತು ಸಂಸ್ಕೃತಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮೆ ಯಾಚಿಸ್ತೇನೆ, ಸಂಸ್ಕೃತಿಗೆ ಧಕ್ಕೆಯಾಗದಂತೆ ನಡೆದುಕೊಳ್ಳುತ್ತೇನೆ ಅಂತ ಪೋಸ್ಟ್ ಮಾಡಿದ್ದಳು. ಅದರಂತೆ ಇಂದು ಮಾಡಿದ ತಪ್ಪಿಗೆ ಕ್ಷಮೆ ಯಾಚಿಸಲು ಶ್ವೇತಾ ರೆಡ್ಡಿ ಧರ್ಮಸ್ಥಳದಲ್ಲಿ ತಪ್ಪು ಕಾಣಿಕೆ ಸಲ್ಲಿಸಿದ್ದಾಳೆ.