ಮಂಗಳೂರಿನಲ್ಲಿ ಕಾನೂನು ಜಾಗೃತಿ ಕಾರ್ಯಾಗಾರ: ಕಾರ್ಮಿಕ ಕಾಯ್ದೆ ಬಗ್ಗೆ ಸಮಗ್ರ ಮಾಹಿತಿ
Saturday, November 5, 2022
ಕಾರ್ಮಿಕ ಕಾಯ್ದೆಗೆ ಮಾಡಲಾದ ಇತ್ತೀಚಿನ ತಿದ್ದುಪಡಿಗಳು ಕಾರ್ಮಿಕರು ಮತ್ತು ಶ್ರಮಜೀವಿಗಳ ಕಲ್ಯಾಣದ ಉದ್ದೇಶದಿಂದ ಕೂಡಿದೆ ಎಂದು ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲರಾದ ಹರೀಶ್ಚಂದ್ರ ಅವರು ಹೇಳಿದರು.
ಮಂಗಳೂರಿನ ಕಾರ್ಮಿಕ ಭವನದಲ್ಲಿ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾನೂನು ಅರಿವು ಮತ್ತು ಪ್ರಚಾರಾಂದೋಲನದ ಭಾಗವಾಗಿ ನಡೆದ ಕಾರ್ಮಿಕ ಕಾನೂನುಗಳ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಕಾನೂನು ಜಾಗೃತಿ ಅಭಿಯಾನದ ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಮತ್ತು ಮಂಗಳೂರು ವಕೀಲರ ಸಂಘದ ಜಂಟಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಕಾರ್ಮಿಕ ಮುಖಂಡರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಕಾನೂನು ಅರಿವು ಮತ್ತು ಜಾಗೃತಿ ಕಾರ್ಯಾಗಾರದಲ್ಲಿ ಕಾರ್ಮಿಕ ಕಾಯ್ದೆ ಹಾಗೂ ಇತ್ತೀಚೆಗೆ ಮಾಡಲಾದ ತಿದ್ದುಪಡಿ ಸೇರಿದಂತೆ ಸಮಗ್ರ ಕಾನೂನು ಮಾಹಿತಿಯನ್ನು ನೀಡಲಾಯಿತು. ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ಶಿವಕುಮಾರ್ ಬಿ.ಇ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಇಲಾಖೆ ಕೈಗೊಂಡ ಕ್ರಮಗಳನ್ನು ವಿವರಿಸಿದರು.