ಬಹು ಅಂಗಾಂಗ ವೈಫಲ್ಯದಿಂದ ಯುವ ಫುಟ್ ಬಾಲ್ ಆಟಗಾರ್ತಿ ಸಾವು: ವೈದ್ಯಕೀಯ ನಿರ್ಲಕ್ಷ್ಯ ಆರೋಪ
Thursday, November 17, 2022
ಚೆನ್ನೈ: ಬಹು ಅಂಗಾಂಗ ವೈಫಲ್ಯದಿಂದ 17 ವರ್ಷ ವಯಸ್ಸಿನ ಯುವ ಫುಟ್ ಬಾಲ್ ಆಟಗಾರ್ತಿಯೊಬ್ಬಳು ಸಾವನ್ನಪ್ಪಿರುವ ದುರ್ಘಟನೆ ಚೆನ್ನೈನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಪ್ರಿಯಾ ಎಂಬ ಯುವ ಫುಟ್ ಬಾಲ್ ಆಟಗಾರ್ತಿ ಮೃತಪಟ್ಟ ದುರ್ದೈವಿ. ಇವರು ಮೊಣಕಾಲಿನ ಅಸ್ಥಿರಜ್ಜು(ಮೊಣಕಟ್ಟು) ಸಮಸ್ಯೆಯಿಂದ ಪೆರಿಯಾರ್ ನಗರದ ಸರ್ಕಾರಿ ಪೆರಿಫೆರಲ್ ಆಸ್ಪತ್ರೆಗೆ ನ.7 ರಂದು ಚಿಕಿತ್ಸೆಗೆಂದು ದಾಖಲಾಗಿದ್ದರು. ಆದ್ದರಿಂದ ಬಲ ಮೊಣಕಾಲಿನ ಅಸ್ಥಿರಜ್ಜು ಸರಿಪಡಿಸಲು ಆಸ್ಪತ್ರೆಯಲ್ಲಿ ಆರ್ತ್ರೋಸ್ಕೊಪಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಆದರೆ ಆ ಬಳಿಕ ಪ್ರಿಯಾ ಕಾಲು ಇನ್ನಷ್ಟು ಊದಿಕೊಂಡಿತ್ತು. ಅವಳ ದೇಹದಲ್ಲಿ ರಕ್ತ ಸಂಚಲನವಾಗದ ಹಾಗೆ ಸಮಸ್ಯೆ ಸಮಸ್ಯೆ ಕಾಣಿಸಿಕೊಂಡಿತ್ತು.
ಇದಾದ ಬಳಿಕ ನ.14 ರಂದು ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯರು ಮತ್ತೊಂದು ಶಸ್ತ್ರ ಚಿಕಿತ್ಸೆಯ ಬಳಿಕ ಆಕೆಯ ಕಾಲನ್ನು ಕತ್ತರಿಸಿದ್ದರು. ಮಂಗಳವಾರ ಮುಂಜಾನೆ 7:15 ರ ಸಮಯಕ್ಕೆ ಪ್ರಿಯಾ ಬಹು ಅಂಗಾಂಗ ವೈಫ್ಯಲ್ಯದಿಂದ ಕೊನೆಯುಸಿರೆಳೆದಿದ್ದಾಳೆ ಎಂದು ವರದಿ ತಿಳಿಸಿದೆ.
ಇಬ್ಬರು ವೈದ್ಯರ ನಿರ್ಲಕ್ಷ್ಯ ಹಾಗೂ ಎಡವಟ್ಟಿನಿಂದ ನಮ್ಮ ಪುತ್ರಿಯನ್ನು ನಾವು ಕಳೆದುಕೊಂಡಿದ್ದೇವೆ ಎಂದು ಪ್ರಿಯಾಳ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಆರೋಗ್ಯ ಸಚಿವ ಮಾ.ಸುಬ್ರಮಣಿಯನ್ ಇಬ್ಬರು ವೈದ್ಯರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಇಬ್ಬರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪ್ರಿಯಾ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಿದ್ದಾರೆ. ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ತಮಿಳುನಾಡು ಬಿಜೆಪಿ ವಕ್ತಾರ ಅಣ್ಣಾಮಲೈ ಪ್ರಿಯಾಳ ನಿಧನಕ್ಕೆ ಸಂತಾಪ ಸೂಚಿಸಿ ಆಡಳಿತರೂಢ ಡಿಎಂಕೆ ವಿರುದ್ಧ ಹರಿಹಾಯ್ದಿದ್ದಾರೆ. ಡಿಎಂಕೆ ಆಡಳಿತದಲ್ಲಿ ಪ್ರತಿಯೊಂದು ಇಲಾಖೆಯೂ ನಾಶವಾಗಿದೆ ಎಂದಿದ್ದಾರೆ.