ತಾನು ನೋಡಿದ್ದ ಯುವಕನನ್ನು ವಿವಾಹವಾಗಲು ಒಲ್ಲೆಯೆಂದ ಪುತ್ರಿಯನ್ನೇ ಹತ್ಯೆ ಮಾಡಿದ ತಾಯಿ
Thursday, November 24, 2022
ಚೆನ್ನೈ: ತಾನು ನೋಡಿರುವ ಯುವಕನನ್ನು ವಿವಾಹವಾಗಲು ಒಪ್ಪದ ಪುತ್ರಿಯನ್ನು ಹೆತ್ತತಾಯಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನ.23ರಂದು ನಡೆದಿದೆ.
ಪಿಚೈ ಮತ್ತು ಆರುಮುಗ ಖಣಿ ದಂಪತಿಯ ಪುತ್ರಿ ಪಿ. ಅರುಣಾ (19) ಹತ್ಯೆಯಾದ ಯುವತಿ. ಪುತ್ರಿಯನ್ನು ಹತ್ಯೆ ಮಾಡಿದ ಬಳಿಕ ಆಕೆಯ ತಾಯಿಯೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಸದ್ಯ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಮೃತ ಅರುಣಾಳ ತಂದೆ ಮತ್ತು ಸಹೋದರ ಚೆನ್ನೈನಲ್ಲಿ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅರುಣಾ ಕೊಯಮತ್ತೂರಿನಲ್ಲಿ ನರ್ಸಿಂಗ್ ಓದುತ್ತಿದ್ದಳು. ಆರು ತಿಂಗಳ ಹಿಂದೆ ಮನೆಗೆ ಮರಳಿದ್ದಳು. ಈ ವೇಳೆ ಕುಟುಂಬ ಅರುಣಾಗೆ ಮದುವೆಯಾಗಲು ಗಂಡು ನೋಡಿದ್ದರು. ಆಕೆಯ ತಾಯಿಯೇ ವರನನ್ನು ಗೊತ್ತುಪಡಿಸಿದ್ದಳು. ಆದರೆ, ಈ ಮದುವೆಯಾಗಲು ಅರುಣಾ ವಿರೋಧಿಸಿದ್ದಳು.
ಮದುವೆಗೆ ವಿರೋಧಿಸಿದ ಬಳಿಕ ತಾಯಿ ಮತ್ತು ಪುತ್ರಿಯ ನಡುವೆ ವಾಗ್ವಾದ ನಡೆದಿದೆ. ತಾಳ್ಮೆ ಕಳೆದುಕೊಂಡ ತಾಯಿ, ಮಗಳ ಕುತ್ತಿಗೆ ಬಿಗಿದು, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಇದಾದ ಬಳಿ ತಾನೂ ವಿಷಕಾರಿ ಪೌಡರ್ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ, ಸ್ಥಳೀಯರು ಆಕೆಯನ್ನು ತಡೆದು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.