ಬುದ್ಧಿಮಾಂದ್ಯವೆಂದು ತನ್ನ ಮಗುವನ್ನೇ ಅಪಾರ್ಟ್‌ಮೆಂಟ್ ಮೇಲಿನಿಂದ ಎಸೆದು ಕೊಂದ ವೈದ್ಯೆ: ಆರೋಪ ಪಟ್ಟಿಯಲ್ಲಿದೆ ತಾಯಿಯ ದುಷ್ಕೃತ್ಯದ ಎಳೆಎಳೆ
Tuesday, November 8, 2022
ಬೆಂಗಳೂರು: 4 ವರ್ಷದ ತನ್ನದೇ ಮಗುವನ್ನು ಬುದ್ಧಿಮಾಂದ್ಯವೆಂದು ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಿಂದ ಕೆಳಗೆಸೆದು ಕೊಂದಿರುವ ಪ್ರಕರಣ ಸಂಬಂಧ ಸಂಪಂಗಿರಾಮನಗರ ಪೊಲೀಸರು ದಂತ ವೈದ್ಯೆಯ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ ಪಾಪಿ ತಾಯಿಯ ದುಷ್ಕೃತ್ಯದ ಬಗ್ಗೆ ಎಳೆಎಳೆಯಾಗಿ ವಿವರಿಸಿ, ತನ್ನ ಸಂತೋಷಕ್ಕೆ ಅಡ್ಡಿಯಾಯಿತೆಂದು ಹೆತ್ತ ಮಗುವನ್ನೇ ಕೊಲ್ಲುವ ಕ್ರೂರತ್ವದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
ಸಂಪಂಗಿರಾಮ ನಗರದ ಸಿಕೆಸಿ ಗಾರ್ಡನ್‌ನಲ್ಲಿನ ಅದ್ವಿತ್ ಅಪಾರ್ಟ್‌ಮೆಂಟ್ ನಿವಾಸಿ ದಂತ ವೈದ್ಯೆ ಸುಷ್ಮಾ ಹಾಗೂ ಸಾಫ್ಟ್‌ವೇರ್ ಇಂಜಿನಿಯರ್ ಕಿರಣ್ ದಂಪತಿಯ ಪುತ್ರಿ ಧೃತಿ (4) ತಾಯಿಂದಲೇ ಹತ್ಯೆಯಾದ ದುರ್ದೈವಿ ಮಗು.
2022ರ ಆಗಸ್ಟ್ 4ರಂದು ಸುಷ್ಮಾ , ತನ್ನ ಮಗು ಧೃತಿಯನ್ನು ಆಟವಾಡಿಸುವ ನೆಪದಲ್ಲಿ 4ನೇ ಮಹಡಿಗೆ ಕರೆದೊಯ್ದು ಅಲ್ಲಿಂದ ಕೆಳಗೆಸೆದು ಮಗುವನ್ನು ಕೊಲೆಗೈದಿದ್ದಾಳೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು . ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ಸಂಪಂಗಿರಾಮನಗರ ಪೊಲೀಸರು ನ್ಯಾಯಾಲಯಕ್ಕೆ 193 ಪುಟಗಳ ಆರೋಪಪಟ್ಟಿಯ ಸಲ್ಲಿಸಿದ್ದಾರೆ. ಮೂವರು ಪ್ರತ್ಯಕ್ಷದರ್ಶಿಗಳು ಸೇರಿದಂತೆ 34 ಸಾಕ್ಷಿಗಳ ಹೇಳಿಕೆಯನ್ನು ಇದರಲ್ಲಿ ದಾಖಲು ಮಾಡಲಾಗಿದೆ.
ಇದರಲ್ಲಿ ಧೃತಿ ಬುದ್ಧಿಮಾಂದ್ಯ ಮಗುವಲ್ಲ. ಮಿದುಳು ಬೆಳವಣಿಗೆ ಆಗಿರಲಿಲ್ಲ ಎಂದು ವೈದ್ಯರು ದೃಢಪಡಿಸಿದ್ದಾರೆ . ಚಿಕಿತ್ಸೆ, ಥೆರಪಿ ಏನೇ ಮಾಡಿದರೂ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡಿರಲಿಲ್ಲ. ಪರಿಣಾಮ ಸುಷ್ಮಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿತ್ತು. ಆದರೆ, ಸುಷ್ಮಾಗೆ ಖಿನ್ನತೆಯಿಲ್ಲ, ಅವರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಪ್ರಮಾಣ ಪತ್ರ ನೀಡಿದ್ದಾರೆ. ಈ ಎಲ್ಲ ವರದಿಯನ್ನು ಆರೋಪಪಟ್ಟಿಯಲ್ಲಿ ಸಲ್ಲಿಸಲಾಗಿದೆ.
ಸುಷ್ಮಾ, ಈ ಹಿಂದೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದರು . ಮಗುವಿನ ಆರೋಗ್ಯ ಮತ್ತು ಆರೈಕೆಯಿಂದ ವೃತ್ತಿ ಜೀವನದಿಂದ ಅವರು ದೂರ ಆಗಬೇಕಾಯಿತು. ಕೆಲಸ ಮುಗಿಸಿ ಪತಿ ಮನೆಗೆ ಬಂದ ಬಳಿಕ ಹೆಚ್ಚು ಕಾಲ ಮಗುವಿನೊಂದಿಗೆ ಕಳೆಯುತ್ತಿದ್ದರು. ಜೀವನವನ್ನು ಸಂತೋಷದಿಂದ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಇದೇ ಕಾರಣಕ್ಕೆ ಮಗುವನ್ನೇ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿರುವುದಾಗಿ ಸುಷ್ಮಾ ಹೇಳಿಕೆ ನೀಡಿದ್ದಾಳೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಹುಬ್ಬಳ್ಳಿ ಮೂಲದ ಸುಷ್ಮಾ ಮತ್ತು ಕಿರಣ್ 11 ವರ್ಷಗಳ ಹಿಂದೆ ವಿವಾಹವಾಗಿದ್ದು, ಬಳಿಕ ಒಂದು ವರ್ಷ ಲಂಡನ್‌ನಲ್ಲಿ ದಂಪತಿ ನೆಲೆಸಿದ್ದರು. ವಾಪಸ್ ಬೆಂಗಳೂರಿಗೆ ಬಂದು ಸಂಪಂಗಿರಾಮನಗರದ ಅದ್ವಿತ್ ಅಪಾರ್ಟ್‌ಮೆಂಟ್‌ನ 2ನೇ ಮಹಡಿಯಲ್ಲಿ ನೆಲೆಸಿದ್ದರು . ಮದುವೆ ಆಗಿ ಆರು ವರ್ಷವಾದರೂ ಸಂತಾನ ಇಲ್ಲದೆ ನೊಂದಿದ್ದ ದಂಪತಿ , ಹಲವು ವೈದ್ಯರನ್ನು ಸಂಪರ್ಕಿಸಿತ್ತು. 4 ವರ್ಷಗಳ ಹಿಂದೆ ಹೆಣ್ಣು ಮಗು ಜನಿಸಿತ್ತು. ಆದರೆ ಧೃತಿ ಮಾನಸಿಕ ಬೆಳವಣಿಗೆಯಲ್ಲಿ ಕುಂಠಿತವಾಗಿತ್ತು. ದಂಪತಿ ಎರಡು ವರ್ಷಗಳಿಂದ ಹಲವು ತಜ್ಞರಿಂದ ಚಿಕಿತ್ಸೆ ಕೊಡಿಸಿದ್ದರು. ಆದರೆ ಮಗುವಿನ ಆರೋಗ್ಯದಲ್ಲಿ ಸುಧಾರಣೆ ಕಂಡಿರಲಿಲ್ಲ.