ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದಾಳೆಂದು ಪುತ್ರಿಯನ್ನೇ ಕಾಲುವೆಗೆ ತಳ್ಳಿ ಕೊಲೆಗೈದ ತಂದೆ
Wednesday, November 9, 2022
ಬಳ್ಳಾರಿ: ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದಾಳೆಂದು ಹೆತ್ತ ಅಪ್ಪನೇ ಪುತ್ರಿಯನ್ನು ಕಾಲುವೆಗೆ ತಳ್ಳಿ ಕೊಲೆಗೈದಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುಡಿತಿನಿ ಪಟ್ಟಣದಲ್ಲಿ ನಡೆದಿದೆ.
ಕುಡುತಿನಿ ಪಟ್ಟಣದ ಬುಡ್ಗ ಜಂಗಮ ಕಾಲನಿ ನಿವಾಸಿ ಓಂಕಾರಗೌಡ ತನ್ನ ಪುತ್ರಿಯನ್ನು ಕೊಲೆಗೈದಿರುವ ತಂದೆ.
ಓಂಕಾರಗೌಡನ ಹೈಸ್ಕೂಲ್ ವ್ಯಾಸಂಗ ಮಾಡುತ್ತಿದ್ದ ಪುತ್ರಿ ಅನ್ಯಕೋಮಿನ ಯುವಕನ ಪ್ರೀತಿಯ ಬಲೆಗೆ ಬಿದ್ದಿದ್ದಳು. ಈ ವಿಚಾರ ಮನೆಯವರಿಗೆ ತಿಳಿದು ಆತನಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದರು. ಆದರೂ ಆಕೆ ಆ ಯುವಕನೊಂದಿಗಿನ ಪ್ರೀತಿ ಒಡನಾಟವನ್ನು ಮುಂದುವರೆಸಿದ್ದಳು. ಪರಿಣಾಮ ಸಿಟ್ಟಿಗೆದ್ದ ಓಂಕಾರಗೌಡ ಆಕೆಯ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ.
ಪುತ್ರಿಯನ್ನು ಅಕ್ಟೋಬರ್ 31ರಂದು ಮಧ್ಯಾಹ್ನ ಸಿನಿಮಾ ತೋರಿಸುವುದಾಗಿ ಬೈಕ್‌ನಲ್ಲಿ ಓಂಕಾರಗೌಡ ಕರೆದೊಯ್ದಿದ್ದಾನೆ. ಚಿತ್ರಮಂದಿರದ ಬಳಿ ಹೋದಾಗ ಸಿನಿಮಾ ಆರಂಭವಾಗಿತ್ತು, ಅಲ್ಲಿಂದ ಹೊಟೇಲ್‌ಗೆ ಕರೆದೊಯ್ದು ತಿಂಡಿ ತಿನ್ನಿಸಿದ್ದಾನೆ. ಬಳಿಕ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿಸಿ, ಆಭರಣದ ಅಂಗಡಿಯಲ್ಲಿ ಒಂದು ಜತೆ ಓಲೆ, ಉಂಗುರವನ್ನೂ ಪುತ್ರಿಗೆ ಕೊಡಿಸಿದ್ದಾನೆ.
ಊರಿಗೆ ಹಿಂತಿರುಗುವ ಹೊತ್ತಿಗೆ ರಾತ್ರಿಯಾಗಿತ್ತು. ಪಟ್ಟಣದ ಸಿದ್ದಮ್ಮನಹಳ್ಳಿ ಬಳಿಯ ಎಚ್‌ಎಲ್‌ಸಿ ಕಾಲುವೆ ಬಳಿಗೆ ಪುತ್ರಿಯನ್ನು ಕರೆತಂದು , “ಸ್ವಲ್ಪ ಹೊತ್ತು ನಿಂತಿರು, ಕೆಲಸವಿದೆ ಎಂದು ಹೇಳಿ ಕಣ್ಮರೆಯಾಗಿದ್ದಾನೆ. ಆ ಬಳಿಕ ಆಕೆಯ ಹಿಂದಿನಿಂದ ಬಂದು ಕಾಲುವೆಗೆ ತಳ್ಳಿದ್ದಾನೆ. ಬಾಲಕಿ “ಅಪ್ಪ , ಅಪ್ಪ” ಎಂದು ಕೂಗುತ್ತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ.
ಪುತ್ರಿಯನ್ನು ಕಾಲುವೆಗೆ ತಳ್ಳಿ ಕೊಲೆಗೈದ ಬಳಿಕ ಓಂಕಾರಗೌಡ ಬೈಕ್ ಅನ್ನು ತನ್ನ ಗೆಳೆಯ ಭೀಮಪ್ಪನ ಮನೆಯಲ್ಲಿಟದಟು ತಿರುಪತಿಗೆ ರೈಲು ಹತ್ತಿದ್ದಾನೆ. ಬಳಿಕ ಸ್ಥಳೀಯರಿಂದ ಈ ವಿಚಾರ ಪೊಲೀಸರಿಗೆ ತಿಳಿದು ಬಂದಿದೆ. ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಕೊಪ್ಪಳದ ಬಳಿ ಓಂಕಾರಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಪುತ್ರಿಯನ್ನು ತಾನೇ ಹತ್ಯೆ ಮಾಡಿರುವುದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಬಾಲಕಿಯ ಶವಕ್ಕಾಗಿ ಪೊಲೀಸರು ಕಾಲುವೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.