ಮಂಗಳೂರು: ಗ್ಯಾಸ್ ಸಿಲಿಂಡರ್ ಕಳವುಗೈದಿದ್ದ ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ
Wednesday, November 23, 2022
ಮಂಗಳೂರು: ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಅಡುಗೆ ಕೋಣೆಯಲ್ಲಿದ್ದ 2 ಗ್ಯಾಸ್ ಸಿಲಿಂಡರ್ ಗಳನ್ನು ಕಳವುಗೈದಿದ್ದ ಓರ್ವ ಆರೋಪಿಗೆ ಮಂಗಳೂರಿನ 2ನೇ ಸಿ.ಜೆ.ಎಂ. ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಪಾಣೆಮಂಗಳೂರಿನ ನರಿಕೊಂಬು ನಿವಾಸಿ ಅಣ್ಣು ಪೂಜಾರಿ(55) ಶಿಕ್ಷೆಗೊಳಗಾದ ಅಪರಾಧಿ. ಈತ ಹಾಗೂ ಗಂಗಯ್ಯ ನೀಲಕಂಠಯ್ಯ ಮುತ್ತಯ್ಯನ ಮಠ ಅಲಿಯಾಸ್ ಸ್ವಾಮಿ(53) ಕದ್ರಿ ಕೈಬಟ್ಟಲು ರೇಗೊ ಕಂಪೌಂಡಿನ ಜಾರ್ಜ್ ಸಿಕ್ವೆರಾ ಎಂಬವರ ಮನೆಯ ಹಿಂಬದಿಯ ಕೋಣೆಗೆ 2022ರ ಆಗಸ್ಟ್ 1ರ ಮಧ್ಯಾಹ್ನ 2ರಿಂದ 4 ಗಂಟೆಯ ಅವಧಿಯಲ್ಲಿ ಒಳಪ್ರವೇಶಿಸಿದ್ದಾರೆ. ಅಡುಗೆ ಕೋಣೆಯಲ್ಲಿದ್ದ ಸುಮಾರು 4,000 ರೂ. ಮೌಲ್ಯದ ಭಾರತ್ ಗ್ಯಾಸ್ ಕಂಪನಿಯ 2 ಸಿಲಿಂಡರ್‌ಗಳನ್ನು ಕಳವುಗೈದಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿದ ಬಳಿಕ ಅಂದಿನ ಮಂಗಳೂರು ಪೂರ್ವ ಪೊಲೀಸ್ ಉಪನಿರೀಕ್ಷಕ ಮಾರುತಿ ಎಸ್.ಪಿ. ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆಯನ್ನು ಪೊಲೀಸ್ ಉಪನಿರೀಕ್ಷಕ ಜ್ಞಾನಶೇಖರ್‌ರವರು ನಡೆಸಿ ಆರೋಪಿಗಳ ವಿರುದ್ಧ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ. ಪ್ರಕರಣದಲ್ಲಿ ಎಲ್ಲಾ ಸಾಕ್ಷಿದಾರರ ವಿಚಾರಣೆಯನ್ನು ನಡೆಸಿ 2ನೇ ಸಿ.ಜೆ.ಎಂ ನ್ಯಾಯಾಲಯದ ನ್ಯಾಯಾಧೀಶ ಮಧುಕರ ಪಿ. ಭಾಗವತ್ ಕೆ 1ನೇ ಆರೋಪಿ ಅಣ್ಣು ಪೂಜಾರಿ ತಪ್ಪಿತಸ್ಥನೆಂದು ನಿರ್ಣಯಿಸಿ 1 ವರ್ಷ ಜೈಲು ಶಿಕ್ಷೆ ಮತ್ತು 250 ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ತಪ್ಪಿದಲ್ಲಿ 2 ದಿನಗಳ ಸಾಮಾನ್ಯ ಸೆರೆಮನೆ ವಾಸ ಅನುಭವಿಸತಕ್ಕದೆಂದು ಆದೇಶಿಸಿರುತ್ತಾರೆ. ಈ ಪ್ರಕರಣದಲ್ಲಿ 2ನೇ ಆರೋಪಿ ಗಂಗಯ್ಯ ನೀಲಕಂಠಯ್ಯ ಅಲಿಯಾಸ್ ಸ್ವಾಮಿ ಮೇಲಿನ ಸಾಕ್ಷ್ಯಧಾರದ ಕೊರತೆಯಿಂದ ನ್ಯಾಯಾಲಯವು ಬಿಡುಗಡೆಗೊಳಿಸಿದೆ.