ಬಂಟ್ವಾಳ: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿರುವ ಮೂವರು ಅಂದರ್; ಇನ್ನೋರ್ವನ ಬಂಧನಕ್ಕೆ ಕ್ರಮ
Thursday, November 3, 2022
ಬಂಟ್ವಾಳ: ಬಂಟ್ವಾಳ ತಾಲೂಕು ಕೊಳ್ಳಾಡು ಗ್ರಾಮದ ನಿವಾಸಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಮೂವರು ಕಾಮುಕರನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿ, ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ.
ಸಜಾದ್, ಆಸೀಫ್ ಹಾಗೂ ಶಂಶೀರ್ ಬಂಧಿತ ಆರೋಪಿಗಳು.
ಈ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಅ.23 ರಂದು ಆಕೆಯ ತಾಯಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆಕೆಯನ್ನು ಪತ್ತೆ ಹಚ್ಚಿರುವ ಪೊಲೀಸರು ಸಖಿ ಕೇಂದ್ರಕ್ಕೆ ಹಾಜರುಪಡಿಸಿ ವೈದ್ಯಕೀಯ ತಪಾಸಣೆ ಮಾಡಿದ್ದಾರೆ. ಸಂತ್ರಸ್ತ ಬಾಲಕಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ನೀಡಿರುವ ದೂರಿನಂತೆ ಆರೋಪಿಗಳಾದ ಸಜಾದ್, ಆಸೀಫ್, ಶಾಫಿ ಎಂಬವರ ಮೇಲೆ ವಿಟ್ಲ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗಿದೆ.
ಬಳಿಕ ಪೊಲೀಸರು ಸಜಾದ್ ಎಂಬಾತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆಸೀಫ್ ಎಂಬಾತ ಈಗಾಗಲೇ ವಾರಂಟ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಾನೆ.
ಇದೀಗ ಸಂತ್ರಸ್ತ ಬಾಲಕಿಯ ಮೇಲೆ ಮತ್ತೋರ್ವ ಆರೋಪಿ ಶಂಶೀರ್ ಎಂಬಾತ ಆಕೆಯ ಮನೆಯಲ್ಲಿಯೇ ಅತ್ಯಾಚಾರ ಮಾಡಿರುವ ಬಗ್ಗೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಶಂಶೀರ್ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಇದೀಗ ಎರಡೂ ಪ್ರಕರಣಗಳು ಸೇರಿ ಒಟ್ಟು ಮೂವರು ಆರೋಪಿಗಳ ಬಂಧನವಾಗಿದೆ. ಶಾಫಿ ಎಂಬ ಆರೋಪಿಯ ದಸ್ತಗಿರಿಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.