ಬೆಳ್ತಂಗಡಿಯಲ್ಲಿ ಸ್ಯಾಟಲೈಟ್ ಕರೆ ಹೋಗಿರೋದು ದೃಢಗೊಂಡಿಲ್ಲ: ದ.ಕ.ಎಸ್ಪಿ ಸ್ಪಷ್ಟನೆ
Sunday, November 27, 2022
ಬೆಳ್ತಂಗಡಿ: ಇಲ್ಲಿನ ತೋಟತ್ತಾಡಿ ಗ್ರಾಮದ ಬೆಂದ್ರಾಳ ಅರಣ್ಯ ಪ್ರದೇಶದಿಂದ ಸ್ಯಾಟ್ ಲೈಟ್ ಕರೆ ಹೋಗಿದೆ ಎಂಬ ಬಗ್ಗೆ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದ್ದು, ಕರೆ ಹೋಗಿರುವ ಬಗ್ಗೆ ದೃಢವಾಗಿಲ್ಲ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನಾವಣೆ ತಿಳಿಸಿದ್ದಾರೆ.
ಬೆಂದ್ರಾಳ ಅರಣ್ಯ ಪ್ರದೇಶದಿಂದ ಸ್ಯಾಟ್ ಲೈಟ್ ಕರೆ ಹೋಗಿದೆ. ಭಾರೀ ಸ್ಫೋಟದ ಸದ್ದು ಕೇಳಿಸಿದೆ ಎನ್ನುವ ವದಂತಿ ಹರಡಿತ್ತು. ಹಿನ್ನೆಲೆಯಲ್ಲಿ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ ಇಲ್ಲಿಂದ ಯಾವುದೇ ಸ್ಯಾಟ್ ಲೈಟ್ ಕರೆ ಹೋಗಿರುವ ಮಾಹಿತಿ ದೃಢಪಟ್ಟಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.
ಬೆಂದ್ರಾಳ ಪ್ರದೇಶದ ಅರಣ್ಯದಲ್ಲಿ ಸ್ಫೋಟದ ಶಬ್ದ ಕೇಳಿಸಿದೆ ಎಂಬ ವದಂತಿ ಹರಡುತ್ತಿದೆ. ಈ ಬಗ್ಗೆಯೂ ಧರ್ಮಸ್ಥಳ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಪ್ರದೇಶದಲ್ಲಿ ಕಾಡಾನೆಗಳ ಉಪಟಳ ಅತ್ಯಂತ ಹೆಚ್ಚಾಗಿದೆ. ಅವುಗಳನ್ನು ಓಡಿಸಲು ಸ್ಥಳೀಯರು ಅರಣ್ಯ ಇಲಾಖೆ ನೀಡುವ ಪಟಾಕಿಗಳನ್ನು ಉಪಯೋಗಿಸುತ್ತಿದ್ದಾರೆ. ಅದರ ಶಬ್ದವೇ ಆಗಿರಬಹುದು ಎಂಬ ಮಾಹಿತಿ ಪೊಲೀಸರ ಪರಿಶೀಲನೆಯ ಸಂದರ್ಭದಲ್ಲಿ ಕಂಡುಬಂದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ತೋಟತ್ತಾಡಿ ಗ್ರಾಮದ ಬೆಂದ್ರಾಳ ಅರಣ್ಯ ಪ್ರದೇಶದಲ್ಲಿ ನ.18ರಂದು ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆಯಾಗಿದೆ ಎಂಬ ವದಂತಿ ಎಲ್ಲೆಡೆ ಹರಡಿತ್ತು. ಈ ನಡುವೆ ಇಲ್ಲಿ ಭಾರೀ ಸ್ಫೋಟದ ಶಬ್ದ ಕೇಳಿದೆ ಎಂಬ ವದಂತಿಯೂ ಹರಡಲಾರಂಭಿಸಿತ್ತು. ಈ ಹಿನ್ನಲೆಯಲ್ಲಿ ಇದೀಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.