ರಾತ್ರಿ ಮಲಗಿದ್ದ ಒಂದೇ ಕುಟುಂಬದ ಮೂವರು ಮಹಿಳೆಯರು ಬೆಳಗ್ಗೆ ಏಳಲೇ ಇಲ್ಲ: ಅನುಮಾನಾಸ್ಪದ ಸಾವಿನ ಹಿಂದಿತ್ತು ಈ ಕಾರಣ
Friday, November 4, 2022
ಚಿತ್ರದುರ್ಗ: ಇಲ್ಲಿನ ಗೋಪನಹಳ್ಳಿ ಗ್ರಾಮದ ಒಂದೇ ಮನೆಯ ಮೂವರು ಮಹಿಳೆಯರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದ ನಿವಾಸಿ ತಿಪ್ಪಜ್ಜಿ (75) , ಪುತ್ರಿಯರಾದ ಮಾರಕ್ಕೆ (45) ಹಾಗೂ ದ್ಯಾಮಕ್ಕ (43) ಮೃತಪಟ್ಟ ಮಹಿಳೆಯರು.
ಮನೆಯಲ್ಲಿ ಇವರು ಮೂವರೇ ಮಹಿಳೆಯರಿದ್ದು, ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಬುಧವಾರ ರಾತ್ರಿ ಮಲಗಿದ್ದ ಇವರು ಗುರುವಾರ ಸಂಜೆಯಾದರೂ ಮನೆಯಿಂದ ಹೊರಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಬಾಗಿಲು ಬಡಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಿಟಕಿಯಿಂದ ನೋಡಿದಾಗ ಮೂವರೂ ಮಲಗಿದ ಸ್ಥಿತಿಯಲ್ಲಿ ಇರುವುದು ತಿಳಿದು ಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಬಾಗಿಲು ಒಡೆದು ಪರಿಶೀಲಿಸಿದಾಗ ಮೂವರು ಮೃತಪಟ್ಟಿರುವುದು ಖಚಿತವಾಗಿದೆ. ತಿಪ್ಪಜ್ಜಿ ಪುತ್ರ ದ್ಯಾಮಣ್ಣ (47) ಅನಾರೋಗ್ಯದಿಂದ ಕೆಲ ತಿಂಗಳ ಹಿಂದೆಯಷ್ಟೇ ಮೃತಪಟ್ಟಿದ್ದರು. ತಿಪ್ಪಜ್ಜಿ ಪತಿ ಕೆಂಚಪ್ಪ ಕೂಡ ವರ್ಷದ ಹಿಂದೆ ಕೊನೆಯುಸಿರೆಳೆದಿದ್ದರು. ಮಾರಕ್ಕ ಮತ್ತು ದ್ಯಾಮಕ್ಕ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡು ತವರು ಸೇರಿದ್ದರು. ಪರಿಣಾಮ ಇಡೀ ಕುಟುಂಬ ಮಾನಸಿಕ ಖಿನ್ನತೆಗೆ ಒಳಗಾಗಿತ್ತು. ಆದ್ದರಿಂದ ಮೂವರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಚಳ್ಳಕೆರೆ ಠಾಣೆಯ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.