ಆನ್ಲೈನ್ ನಲ್ಲಿ ಲಕ್ಷಾಂತರ ರೂ. ವಂಚನೆಗೊಳಗಾದ ಉಪನ್ಯಾಸಕಿ ಬಾವಿಗೆ ಹಾರಿ ಆತ್ಮಹತ್ಯೆ
Saturday, November 12, 2022
ಬೀದರ್: ಕೆಲಸಕ್ಕಾಗಿ ಆನ್‍ಲೈನ್‍ನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿರುವ ಉಪನ್ಯಾಸಕಿಯೋರ್ವರು ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ.
ಆರತಿ ಕನಾಟೆ (28) ಆತ್ಮಹತ್ಯೆ ಮಾಡಿಕೊಂಡ ಉಪನ್ಯಾಸಕಿ.
ಆರತಿ ಕನಾಟೆ ಆನ್‍ಲೈನ್‍ನಲ್ಲಿ ಪರಿಚಯವಾಗಿರುವ ವ್ಯಕ್ತಿ ಅವರಿಗೆ ಆನ್‍ಲೈನ್‍ನಲ್ಲಿ ಮನೆಯಲ್ಲೇ ಕುಳಿತು ಉದ್ಯಮ ಮಾಡಲು ಹಣ ಹೂಡಿಕೆ ಮಾಡಿ ಎಂದಿದ್ದಾನೆ. ಆ ವ್ಯಕ್ತಿಯ ಮಾತನ್ನು ನಂಬಿದ ಉಪನ್ಯಾಸಕಿ ಆತನಿಗೆ ಬರೋಬ್ಬರಿ 2.50 ಲಕ್ಷ ರೂ.ವರೆಗೆ ಹಣ ಕಳುಹಿಸಿದ್ದಾರೆ. ಬಳಿಕ ಇನ್ನೂ 82 ಸಾವಿರ ರೂ. ಹಣ ಕಳಿಸಿದ್ರೆ ಉದ್ಯೋಗದ ಜೊತೆಗೆ ಹೂಡಿಕೆ ಮಾಡಿರುವ ಎಲ್ಲಾ ಹಣವನ್ನು ವಾಪಸ್ ಕೊಡುವುದಾಗಿ ತಿಳಿಸಿದ್ದಾನೆ.
ಆದರೆ ಆ ಬಳಿಕ ಆತ ವಂಚಿಸಿರುವುದು ಉಪನ್ಯಾಸಕಿಗೆ ತಿಳಿದು ಬಂದಿದೆ. ಮನೆಯವರ ಗಮನಕ್ಕೆ ಬಾರದಂತೆ ಲಕ್ಷಾಂತರ ರೂ. ಕಳೆದುಕೊಂಡ ಭೀತಿಯಿಂದ ಉಪನ್ಯಾಸಕಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಹಣ ಹೂಡಿಕೆ ಮಾಡಿದ್ದ ಏಜೆನ್ಸಿ ಬಗ್ಗೆ ಡೆತ್‍ನೋಟ್‍ನಲ್ಲಿ ಉಲ್ಲೇಖಿಸಿ ಬರೆದಿದ್ದಾರೆ. ಉಪನ್ಯಾಸಕಿ ಬಸವಕಲ್ಯಾಣ ನಗರದ ಖಾಸಗಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.