ತಾಯಿ - ಮಗ ನೇಣಿಗೆ ಶರಣು: ಸೊಸೆ ಕಾರಣ?
Sunday, November 13, 2022
ಬೆಂಗಳೂರು: ತಾಯಿ ಹಾಗೂ ಪುತ್ರ ನೇಣಿಗೆ ಶರಣಾಗಿರುವ ದುರ್ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಯಿ ಭಾಗ್ಯಮ್ಮ ( 57 ) , ಪುತ್ರ ಶ್ರೀನಿವಾಸ್ ( 33 ) ಮೃತ ದುರ್ದೈವಿಗಳು.
ಶ್ರೀನಿವಾಸ್ ಅವರು ಕೆಲವು ದಿನಗಳ ಹಿಂದೆ ವಯಸ್ಸಾದ ಹಿನ್ನೆಲೆಯಲ್ಲಿ ತಮ್ಮ ತಾಯಿಯನ್ನು ಊರಿನಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಆದರೆ ಇದೇ ಕಾರಣವನ್ನು ಮುಂದಿಟ್ಟುಕೊಂಡು ಶ್ರೀನಿವಾಸ್ ಪತ್ನಿ ಸಂಧ್ಯಾ ತನ್ನ ಪತಿಯೊಂದಿಗೆ ನಿತ್ಯ ಜಗಳ ಮಾಡುತ್ತಿದ್ದಳು ಎನ್ನಲಾಗಿದೆ.
ರವಿವಾರ ಬೆಳಗ್ಗೆ ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ಸಂಭವಿಸಿದೆ. ಇದರಿಂದ ಮನನೊಂದ ಶ್ರೀನಿವಾಸ್ ತನ್ನ ತಾಯಿಯೊಂದಿಗೆ ಮನೆಯಲ್ಲಿಯೇ ನೇಣುಬಿಗಿದುಕೊಂಡು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆಮಾಡಿದ್ದು, ಈ ಬಗ್ಗೆ ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.