ರಸ್ತೆ ಅಪಘಾತದಲ್ಲಿ ಗರ್ಭಿಣಿ ಪತ್ನಿ ಮೃತ್ಯು: ಮನನೊಂದು ಆತ್ಮಹತ್ಯೆಗೆ ಶರಣಾದ ಪತಿ
Friday, November 18, 2022
ಪುಣೆ(ಮಹಾರಾಷ್ಟ್ರ): ಆಸ್ಪತ್ರೆಗೆ ತಿಂಗಳ ಚಿಕಿತ್ಸೆಗೆ ಬಂದ ನಾಲ್ಕು ತಿಂಗಳ ಗರ್ಭಿಣಿ ಪತ್ನಿ ರಸ್ತೆ ಅಪಘಾತದಲ್ಲಿ ದಾರುಣವಾಗಿ ಕಣ್ಣೆದುರೇ ಮೃತಪಟ್ಟಿರುವುದನ್ನು ಸಹಿಸಲಾಗದೆ ದುಃಖದಿಂದ ಪತಿಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಪುಣೆಯಲ್ಲಿ ನಡೆದಿದೆ.
ದೊಂಡಕರ್ವಾಡಿಯ ರಮೇಶ್ ನನ್ನಾಥ್ ಕನಕರ್ (29) ಸಾವನ್ನಪ್ಪಿರುವ ಯುವಕ. ರಮೇಶ್ ಎಂಟು ತಿಂಗಳ ಹಿಂದೆ ವಿದ್ಯಾ ಎಂಬಾಕೆಯನ್ನು ಮದುವೆಯಾಗಿದ್ದಾರೆ. ಇದೀಗ ಆಕೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಕಳೆದ ವಾರ ಪುಣೆಯ ನಾರಾಯಣ ಗಾಂವ್ ಆಸ್ಪತ್ರೆಗೆ ತಿಂಗಳ ಚಿಕಿತ್ಸೆಗೆಂದು ಬಂದಿದ್ದರು. ಚಿಕಿತ್ಸೆ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಅವರ ಬೈಕ್ ಗೆ ಟ್ರಾಕ್ಟರ್ ಮುಖಾಮುಖಿಯಾಗಿದೆ.
ಪರಿಣಾಮವಾಗಿ ಪತ್ನಿ ವಿದ್ಯಾ ಬೈಕ್‌ನಿಂದ ಬಿದ್ದಿದ್ದಾರೆ. ಈ ವೇಳೆ ಆಕೆ ತಲೆಯ ಮೇಲೆಯೇ ಟ್ರಾಕ್ಟರ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನು ಕಣ್ಣಾರೆ ಕಂಡಿರುವ ರಮೇಶ್ ಶಾಕ್‌ಗೆ ಒಳಗಾಗಿದ್ದರು. ಪರಿಣಾಮ ಒತ್ತಡಕ್ಕೆ ಒಳಗಾಗಿದ್ದ ಆತ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಗರದ ಕಿರಿದಾದ ಮತ್ತು ಕೆಟ್ಟ ರಸ್ತೆಗಳಿಂದಾಗಿ ಈ ಸಾವು ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.