Sulya : ಪ್ರವೀಣ್ ನೆಟ್ಟಾರು ಕೊಲೆಯ ನಂತರ ತಪ್ಪಿಸಿಕೊಂಡ ಆರೋಪಿಗಳ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದ ಏನ್ಐಎ..!
Wednesday, November 2, 2022
ಸುಳ್ಯ
ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಬಾಕಿ ಉಳಿದಿರುವ ನಾಲ್ಕು ಆರೋಪಿಗಳ ಬಗ್ಗೆ ಸುಳಿವು ನೀಡದರೆ ಬಹುಮಾನ ನೀಡುವುದಾಗಿ ಬೆಂಗಳೂರು ಎನ್ಐಎ ಪೋಲಿಸರು ಪ್ರಕಟಣೆ ಹೊರಡಿಸಿದ್ದಾರೆ.
ಕಳೆದ ಜುಲೈ 26 ರಂದು ಸುಳ್ಯ ತಾಲೂಕಿನ ಬೆಳ್ಳಾರೆಯ ಅಕ್ಷಯಾ ಚಿಕನ್ ಅಂಗಡಿ ಮಾಲಕ ಹಾಗೂ ಯುವ ಬಿಜೆಪಿ ಮುಂದಾಳು ಪ್ರವೀಣ್ ನೆಟ್ಟಾರು ಅವರನ್ನು ಅಂಗಡಿ ಬಂದ್ ಮಾಡುವ ವೇಳೆ ಬೈಕಿನಲ್ಲಿ ಬಂದು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು.
ಅ ಬಳಿಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಸ್ಥಳೀಯ ಯುವಕರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಈ ಕೊಲೆಗೆ ಪ್ರಮುಖವಾಗಿ ಪ್ಲಾನ್ ರೂಪಿಸಿದ ಹಾಗೂ ಸಹಾಯ ಮಾಡಿದ ಪ್ರಮುಖ ನಾಲ್ವರು ಆರೋಪಿಗಳ ಬಂಧನವಾಗಿಲ್ಲ ಎನ್ನಲಾಗುತ್ತಿದೆ. ನಂತರದಲ್ಲಿ ಈ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವರ್ಗಾವಣೆ ಮಾಡಲಾಗಿತ್ತು.
ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಎನ್ಐಎ ಕೊಲೆ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ,
ಇದೀಗ ಪ್ರಕರಣ ಪ್ರಮುಖ ಆರೋಪಿಗಳಾದ ಪ್ರವೀಣ್ ನೆಟ್ಟಾರು ಅವರ ಕೊಲೆಗೆ ಪ್ಲಾನ್ ರೂಪಿಸಿದ ಮಹಮ್ಮದ್ ಮುಸ್ತಾಫಾ ಮತ್ತು ತುಫೈಲ್ ಅವರ ಬಗ್ಗೆ ಸುಳಿವು ನೀಡಿದರೆ ತಲಾ 5 ಲಕ್ಷ ಬಹುಮಾನ, ಜೊತೆಗೆ ಕೊಲೆಗೆ ಸಹಕಾರ ನೀಡಿದ ಉಮ್ಮರ್ ಫಾರೂಕ್ ಹಾಗೂ ಅಬೂಬಕ್ಕರ್ ಸಿದ್ದೀಕ್ ಅವರ ಬಗ್ಗೆ ಮಾಹಿತಿ ನೀಡಿದರೆ ತಲಾ 2 ಲಕ್ಷ ಬಹುಮಾನ ನೀಡುವುದಾಗಿ ಏನ್ಐಎ ಘೋಷಣೆ ಮಾಡಿದೆ. ಮಾಹಿತಿ ನೀಡಿದವರಿಗೆ ಬಹುಮಾನ ನೀಡುವ ಜೊತೆಗೆ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದೆ.