ಜಾಮೀನು ಮೇಲೆ ಹೊರ ಬಂದ ದಂಪತಿ ಮತ್ತೆ ಜೈಲು ಪಾಲು: ಟ್ಯಾಟೂ ಕಲಾವಿದರಾಗಿಯೇ ಇವರು ಮಾಡುತ್ತಿದ್ದ ನೀಚ ಕೃತ್ಯವೇನು ಗೊತ್ತೇ?
Thursday, November 17, 2022
ಬೆಂಗಳೂರು: ನಿಷೇಧಿತ ಮಾದಕದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನು ಮೇಲೆ ಬಿಡುಗಡೆಯಾಗಿದ್ದ ಕೇರಳ ಮೂಲದ ದಂಪತಿ ಮತ್ತೆ ಡ್ರಗ್ಸ್ ಕೇಸ್ ನಲ್ಲಿ ಬೆಂಗಳೂರು ಪೊಲೀಸರಿಂದ ಬಂಧನವಾಗಿದ್ದಾರೆ.
ಕೊಟ್ಟಾಯಂ ಮೂಲದ ಸಿಗಿಲ್ ವರ್ಗೀಸ್ ಮಂಬರಂಪಿಲ್ (32) ಮತ್ತು ಕೊಯಮತ್ತೂರು ಮೂಲದ ವಿಷ್ಣುಪ್ರಿಯಾ (22) ಬಂಧಿತ ದಂಪತಿ. ಬಂಧಿತರಿಂದ 7 ಕೋಟಿ ರೂ. ಮೌಲ್ಯದ ಹಶಿಶ್ ಎಣ್ಣೆಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಸಿಗಿಲ್ ವರ್ಗೀಸ್ ಹಾಗೂ ವಿಷ್ಣುಪ್ರಿಯಾ ಟ್ಯಾಟೂ ಕಲಾವಿದರಾಗಿದ್ದು, ಬೆಂಗಳೂರಿನಲ್ಲಿ ವಾಸಿಸುದ್ದರು. ಈ ದಂಪತಿ ಹಶಿಶ್ ಎಣ್ಣೆಯನ್ನು ಸಂಗ್ರಹಿಸಿಕೊಂಡು ಅದನ್ನು ಅಗತ್ಯ ಇರುವವರಿಗೆ ಪೂರೈಕೆ ಮಾಡುತ್ತಿದ್ದರು ಎಂದು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅಲ್ಲದೆ ಅವರಿಗೆ ಹಶಿಶ್ ಎಣ್ಣೆ ಮಾರಾಟಕ್ಕೆ ಸಹಕರಿಸುತ್ತಿದ್ದ ಮಡಿವಾಳದ ನಿವಾಸಿ ವಿಕ್ರಮ್ (23) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಮಾರ್ಚ್‌ನಲ್ಲಿ 80ಗ್ರಾಂ ಹಶಿಶ್ ಎಣ್ಣೆಯೊಂದಿಗೆ ವಿಕ್ರಮ್ ನನ್ನು ಪೊಲೀಸರು ಬಂಧಿಸಿದ್ದರು. ಈತ ನೀಡಿರುವ ಮಾಹಿತಿಯ ಮೇರೆಗೆ ಪೊಲೀಸರು ವಿಷ್ಣುಪ್ರಿಯಾ ಹಾಗೂ ಸಿಗಿಲ್ ಮನೆಯನ್ನು ಶೋಧಿಸಿದ್ದಾರೆ. ಆಗ ಅವರ ಮನೆಯಲ್ಲಿ 7 ಕೋಟಿ ರೂ. ಮೌಲ್ಯದ 12 ಕೆಜಿ ಹಶಿಶ್ ಎಣ್ಣೆ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ದಂಪತಿ ಉತ್ತರ ಬೆಂಗಳೂರಿನ ಕೊತ್ತನೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ಸೋಮವಾರ ಪರಪ್ಪನ ಅಗ್ರಹಾರದಲ್ಲಿ ಮಾದಕ ವಸ್ತು ದಂಧೆ ನಡೆಸಿದ್ದರು. ಈ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದಾಗ ಮೂವರನ್ನು ಬಂಧಿಸಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಡ್ರಗ್ಸ್ ತರಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಷ್ಣುಪ್ರಿಯಾ ಮತ್ತು ಸಿಗಿಲ್ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಜೊತೆಯಾಗಿ ಓದುತ್ತಿದ್ದು, ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಅಲ್ಲದೆ ಹಚ್ಚೆ ಕಲಾವಿದರಾಗಿ ಕೆಲಸ ಮಾಡುತ್ತಿದ್ದರು. ಇದರ ನೆಪದಲ್ಲಿ ಇಬ್ಬರೂ ಡ್ರಗ್ಸ್ ದಂಧೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಐಷಾರಾಮಿ ಜೀವನ ಬಯಸಿ ವ್ಯಾಪಾರಕ್ಕೆ ಇಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.