ಪ್ರೇಯಸಿಯ ವಿವಾಹವಾಗಲು ತಾನು ಕೆಲಸ ನಿರ್ವಹಿಸುತ್ತಿದ್ದ ಎಟಿಎಂನಿಂದಲೇ ಹಣ ಎಗರಿಸಿದ ಸೆಕ್ಯುರಿಟಿ ಗಾರ್ಡ್
Tuesday, November 29, 2022
ಬೆಂಗಳೂರು: ಪ್ರೇಯಸಿಯನ್ನು ವಿವಾಹವಾಗಲು ಖದೀಮನೋರ್ವನು ತಾನು ಸೆಕ್ಯುರಿಟಿ ಗಾರ್ಡ್ ಆಗಿ ವೃತ್ತಿ ನಿರ್ವಹಿಸುತ್ತಿದ್ದ ಎಟಿಎಂನಲ್ಲೇ ಹಣ ಎಗರಿಸಿರುವ ಘಟನೆ ನಗರದ ವಿಲ್ಸನ್ ಗಾರ್ಡನ್ನಲ್ಲಿ ನಡೆದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ದಿಪೋಂಕರ್ ನೋಮೋಸುದರ್ ಬಂಧಿತ ಆರೋಪಿ. ಈತ ಕಳವುಗೈದಿದ್ದ ಹಣದಲ್ಲಿ ಮೊದಲು ಹೋಟೆಲೊಂದನ್ನು ತೆರೆಯಲು ಪ್ಲ್ಯಾನ್ ಮಾಡಿದ್ದ. ಬಳಿಕ ಒಂದು ವರ್ಷ ದುಡಿದು ಪ್ರೇಯಸಿಯನ್ನು ಮದುವೆ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದ. ಆದರೆ, ಖದೀಮನ ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಎಟಿಎಂಗೆ ಹಣ ತುಂಬಲು ಬರ್ತಿದ್ದವರೊಂದಿಗೆ ಸಲುಗೆಯಿಂದ ಇರುತ್ತಿದ್ದ ಅರೋಪಿ, ಹಣ ಹಾಕುವವರು ಬಳಸುತ್ತಿದ್ದ ಐಡಿ ಹಾಗೂ ಪಾಸ್ ವರ್ಡ್ ಅನ್ನು ಗಮನಿಸುತ್ತಿದ್ದ. ಬಳಿಕ ಅದೇ ಐಡಿ ಹಾಗೂ ಪಾಸ್ ವರ್ಡ್ ಮೂಲಕ ವಿಲ್ಸನ್ ಗಾರ್ಡನ್ನಲ್ಲಿ ತಾನು ಕೆಲಸ ಮಾಡ್ತಿದ್ದ ಎಟಿಎಂನಿಂದಲೇ ಹಣವನ್ನು ದೋಚುತ್ತಿದ್ದ. ಹೀಗೆ ಆತ ಸುಮಾರು 20 ಲಕ್ಷ ರೂ. ಅಧಿಕ ಹಣ ದೋಚಿದ್ದ.
ಸದ್ಯ ಆರೋಪಿಯನ್ನು ಬಂಧಿಸಿರುವ ವಿಲ್ಸನ್ ಗಾರ್ಡನ್ ಪೊಲೀಸರು ಆತನಲ್ಲಿದ್ದ 16,20,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಉಳಿದ ಐದು ಲಕ್ಷ ರೂ. ಹಣವನ್ನು ಖರ್ಚು ಮಾಡಿದ್ದಾನೆ. ಮಾಡಿದ್ದ ಸಾಲ ಹಾಗೂ ಹೋಟೆಲ್ ಮಾಡಲಿಕ್ಕೆ ಅರೋಪಿ ಹಣ ಬಳಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.