-->
ಮಂಗಳೂರು: ಮಳಲಿ ಮಸೀದಿಯಿರುವ ಸ್ಥಳದಲ್ಲೇ ಮಂದಿರ ನಿರ್ಮಾಣದ ಘೋಷಣೆ ಮಾಡಿದ ವಿಎಚ್ ಪಿ

ಮಂಗಳೂರು: ಮಳಲಿ ಮಸೀದಿಯಿರುವ ಸ್ಥಳದಲ್ಲೇ ಮಂದಿರ ನಿರ್ಮಾಣದ ಘೋಷಣೆ ಮಾಡಿದ ವಿಎಚ್ ಪಿ


ಮಂಗಳೂರು: ಮಳಲಿ ಮಸೀದಿ ವಿವಾದದ ಹಿನ್ನಲೆಯಲ್ಲಿ ಮಂಗಳೂರು ಜಿಲ್ಲಾ 3ನೇ ಹೆಚ್ಚುವರಿ ನ್ಯಾಯಾಲಯ ನೀಡಿರುವ ತೀರ್ಪನ್ನು ವಿಎಚ್ ಪಿ ಸ್ವಾಗತಿಸಿದೆ. ಇದು ಹಿಂದೂಗಳ ಭಾವನೆಗೆ ಸಂದಿರುವ ಮೊದಲನೇ ಹಂತದ ಜಯ. ಆದ್ದರಿಂದ ನಾವು ಮುಂದಿನ ದಿನಗಳಲ್ಲಿ ಮಂದಿರವಿರುವ ಸ್ಥಳದಲ್ಲಿಯೇ ಭವ್ಯವಾದ ಮಂದಿರ ನಿರ್ಮಾಣವನ್ನು ಮಾಡಲಿದ್ದೇವೆ ಎಂದು ವಿಎಚ್ ಪಿ ಪ್ರಾಂತೀಯ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಘೋಷಿಸಿದ್ದಾರೆ.

ನಗರದ ಕದ್ರಿಯ ವಿಶ್ವಶ್ರೀ ಸಭಾಂಗಣದಲ್ಲಿ ಮಾತನಾಡಿದ ಅವರು, ನ್ಯಾಯಾಲಯವು ಮಸೀದಿಯ ಆಡಳಿತ ಕಮಿಟಿಯ ಅರ್ಜಿಯನ್ನು ವಜಾ ಮಾಡಿ ವಿಎಚ್ ಪಿ ಅಹವಾಲನ್ನು ಎತ್ತಿ ಹಿಡಿದಿದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯ ಸಂಪೂರ್ಣವಾಗಿ ಹಿಂದೂಗಳ ಪರ ತೀರ್ಪು ನೀಡಲಿದೆ. ಮಸೀದಿಯ ಕಮಿಟಿಯನ್ನು ಆಗ್ರಹಿಸಿಯೋ, ವಿನಂತಿಸಿಯೋ ಹೋರಾಟದಲ್ಲಿ ಸಂಘರ್ಷವಿಲ್ಲದಂತೆ ಅವರೊಡನೆ ಚರ್ಚಿಸಿ ಇದನ್ನು ಇತ್ಯರ್ಥ ಮಾಡಲು ವಿಎಚ್ ಪಿ ಚಿಂತಿಸಿದೆ ಎಂದರು.

ಮಸೀದಿ ಇರುವ ಸ್ಥಳದಲ್ಲಿ ಹಿಂದೂ ದೇವಾಲಯದ ಕುರುಹು ಇದ್ದ ಕಾರಣಕ್ಕೆ ಮಸೀದಿಯ ನವೀಕರಣಕ್ಕೆ ತಡೆ ತಂದಿದ್ದೆವು. ಆ ಸ್ಥಳದಲ್ಲಿ 800 ವರ್ಷಗಳ ಹಿಂದೆ ಅಲ್ಲಿ ದೇವಾಲಯ ಇತ್ತು ಎಂಬ ನಂಬಿಕೆ ಇದೆ.‌ ತಾಂಬೂಲ ಪ್ರಶ್ನೆಯಲ್ಲೂ ಅದು ಗೋಚರಿಸಿತ್ತು. ಮುಂದಿನ ದಿನಗಳಲ್ಲಿ ಅಷ್ಟಮಂಗಲ ಪ್ರಶ್ನೆ ಇಟ್ಟು ಮುಂದಿನ ನಿರ್ಧಾರ ಮಾಡುತ್ತೇವೆ ಎಂದರು.

ವಿವಾದಿತ ಸ್ಥಳವನ್ನು ಪುರಾತತ್ವ ಇಲಾಖೆಯಿಂದ ಸರ್ವೆ ನಡೆಸಲು ಸಾಕಷ್ಟು ಬಾರಿ ಜಿಲ್ಲಾಡಳಿತವನ್ನು ಕೋರಿದ್ದೆವು. ಆದರೆ ಈವರೆಗೆ ನಮಗೆ ಯಾವ ಸ್ಪಂದನೆಯೂ ದೊರಕಿಲ್ಲ. ಆದ್ದರಿಂದ ನೂತನ ಜಿಲ್ಲಾಧಿಕಾರಿಯವರು ಈ ಬಗ್ಗೆ ತಕ್ಷಣ ಪುರಾತತ್ವ ಇಲಾಖೆಯಿಂದ ಸರ್ವೆ ಮಾಡಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ ಎಂದು ಶರಣ್ ಪಂಪ್ ವೆಲ್ ಹೇಳಿದರು.

ನ್ಯಾಯಾಲಯ ಮಸೀದಿಯ ಆಡಳಿತ ಕಮಿಟಿಯ ಅರ್ಜಿಯನ್ನು ವಜಾ ಮಾಡಿ ವಿಎಚ್ ಪಿ ಅಹವಾಲನ್ನು ಎತ್ತಿ ಹಿಡಿದಿರುವ ಹಿನ್ನಲೆಯಲ್ಲಿ ವಿಎಚ್ ಪಿ ಕಚೇರಿಯ ಬಳಿ ಹಿಂದೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು. ಅಲ್ಲದೆ ಮಳಲಿ ಮಂದಿರ ತಮ್ಮದೆಂದು ಘೋಷಣೆ ಕೂಗಿದರು.

Ads on article

Advertise in articles 1

advertising articles 2

Advertise under the article