ಸರಕಾರಿ ಉದ್ಯೋಗ ಕೊಡಿಸುವುದಾಗಿ 20ಕೋಟಿ ರೂ. ವಂಚನೆ: ಮಾತಿನಲ್ಲೇ ಮರುಳು ಮಾಡುವ ಖತರ್ನಾಕ್ ವಂಚಕಿ ಪೊಲೀಸ್ ಬಲೆಗೆ
Tuesday, December 27, 2022
ಬೆಂಗಳೂರು: ಎಸ್‌ಡಿಎ ಸೇರಿದಂತೆ ಇನ್ನಿತರ ಸರಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಲವು ಮಂದಿಯಿಂದ ಕೋಟ್ಯಂತರ ರೂ. ಪಡೆದು ವಂಚಿಸಿರುವ ಖತರ್ನಾಕ್ ಮಹಿಳೆಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಮತ್ತು ಜಯನಗರ ನಿವಾಸಿ ಆರ್.ಪಿ. ಉಮಾದೇವಿ (44) ಬಂಧಿತ ಮಹಿಳೆ. ಈಕೆ ಸಿದ್ದಾಪುರ ನಿವಾಸಿ ಸತೀಶ್ ಎಂಬುವರಿಂದ 6 ಲಕ್ಷ ರೂ. ಹಣ ಪಡೆದು ವಂಚಿಸಿರುವ ಹಿನ್ನೆಲೆಯಲ್ಲಿ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉಮಾದೇವಿ ತನ್ನನ್ನು ಎಸ್.ಜೆ.ಪಿ. ಕಾಲೇಜು ಪ್ರಾಂಶುಪಾಲೆ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದಳು. ತನಗೆ ಬಹಳಷ್ಟು ಅಧಿಕಾರಿಗಳ ಪರಿಚಯವಿದ್ದು, ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ಬಣ್ಣದ ಮಾತುಗಳನ್ನಾಡಿ ಹಲವರನ್ನು ನಂಬಿಸಿ ಲಕ್ಷಾಂತರ ರೂ. ಪಡೆದು ಅತ್ತ ಕೆಲಸವೂ ಕೊಡಿಸದೆ, ಇತ್ತ ಹಣ ವಾಪಸ್ ನೀಡದೆ ವಂಚಿಸುತ್ತಿದ್ದಳು.
ಸರ್ಕಾರಿ ಹುದ್ದೆಯ ಆಕಾಂಕ್ಷಿಗಳಿಗೆ ಪ್ರಥಮ ದರ್ಜೆ ಸಹಾಯಕ ಹುದ್ದೆಯನ್ನು ಕೊಡಿಸುವುದಾಗಿ ನಂಬಿಸಿ ಸುಮಾರು 40 ಜನರಿಂದ ಬರೋಬರಿ 20 ಕೋಟಿ ರೂ. ವಂಚಿಸಿದ್ದಾಳೆ. ಈಕೆ ಮಾತಿನಲ್ಲೇ ಮರುಳು ಮಾಡಿ ವಂಚಿಸುವ ಮಹಾನ್ ಚತುರೆಯಾಗಿದ್ದು, ಈಕೆಯ ಮಾತಿಗೆ ಮರುಳಾಗಿರುವ ಹಲವು ಮಂದಿ ಹಣ ನೀಡಿ ಮೋಸ ಹೋಗಿದ್ದಾರೆ.
ಆರೋಪಿ ಮಹಿಳೆ ಸಿದ್ದಾಪುರ, ಜಯನಗರ, ಗಿರಿನಗರ, ಬನಶಂಕರಿ, ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಸುಮಾರು 30 ರಿಂದ 40 ಜನರಿಗೆ ವಂಚಿಸಿದ್ದಾಳೆ. ಈ ಸಂಬಂಧ ವಂಚನೆಗೊಳಗಾದವರ ಹೇಳಿಕೆಯನ್ನು ಪಡೆಯಲಾಗಿದೆ. ಎಷ್ಟು ಮೊತ್ತದ ವಂಚನೆ ಎಂಬುದರ ಬಗ್ಗೆ ಆಡಿಟ್ ಮಾಡಲು ಕೊಟ್ಟಿದ್ದೇವೆ. ಅದರ ವರದಿಯಾಧರದಲ್ಲಿ ತನಿಖೆ ನಡೆದು ನಿಖರವಾಗಿ ತಿಳಿದುಬರಲಿದೆ. ವಂಚನೆಗೊಳಗಾದ ಸಂತ್ರಸ್ತರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣಾಗಳಲ್ಲಿ ದೂರು ನೀಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ದಾಪುರ ನಿವಾಸಿ ಸತೀಶ್ ತಮ್ಮ 22 ವರ್ಷದ ಪುತ್ರನಿಗೆ ಸರ್ಕಾರಿ ಕೆಲಸ ಕೊಡಿಸಲು ಪ್ರಯತ್ನಿಸುತ್ತಿದ್ದರು. ಆತ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದು ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಸತೀಶ್ ಗೆ ಸಿದ್ದಾಪುರ ನಿವಾಸಿ ರಾಮಣ್ಣ ಎಂಬಾತನ ಮೂಲಕ ಉಮಾದೇವಿ ಪರಿಚಯವಾಗಿದ್ದಾಳೆ. ತಾನು ಎಸ್.ಜೆ.ಪಿ ಕಾಲೇಜಿನ ಪ್ರಾಂಶುಪಾಲೆ, ನನಗೆ ತುಂಬಾ ಅಧಿಕಾರಿಗಳ ಪರಿಚಯವಿದೆ. ನಿಮ್ಮ ಪುತ್ರನಿಗೆ ಸರ್ಕಾರಿ ಕಾಲೇಜಿನಲ್ಲಿ ಎಫ್‌ಡಿಸಿ ಕೆಲಸ ಕೊಡಿಸುತ್ತೇನೆ. ಆದರೆ ಅದಕ್ಕೆಲ್ಲ ಬಹಳ ಖರ್ಚಾಗುತ್ತದೆ ಎಂದು ಹೇಳಿದ್ದಾಳೆ. ಅಲ್ಲದೆ ಕೆಲಸ ಕೊಡಿಸಲು 8 ಲಕ್ಷ ರೂ. ಖರ್ಚಾಗುತ್ತದೆ. ಕೆಲಸದ ಪ್ರೊಸೆಸ್ ಮಾಡಬೇಕು, ಆದ್ದರಿಂದ ಹಣವನ್ನು ಬೇಗ ಹೊಂದಿಸಿ ಕೊಡಿ ಎಂದಿದ್ದಾರೆ.
ಇವರ ಮಾತನ್ನು ನಂಬಿದ ಸತೀಶ್ 6.55 ಲಕ್ಷ ರೂ. ಹಣ ಹೊಂದಿಸಿ ಉಮಾದೇವಿಗೆ ನೀಡಿದ್ದಾರೆ. ಹೀಗೆ ಹಂತ ಹಂತವಾಗಿ 8.5 ಲಕ್ಷ ರೂ. ನೀಡಿದ್ದಾರೆ. ಆದರೆ ಕೆಲಸವನ್ನು ಕೊಡಿಸದೇ ಹಣವನ್ನು ವಾಪಸ್ ನೀಡದೇ ಉಮಾದೇವಿ ವಂಚಿಸಿದ್ದಾಳೆ. ಇದರಿಂದ ಬೇಸತ್ತ ಸತೀಶ್ ಈ ಸಂಬಂಧ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಪೊಲೀಸರು ಆರೋಪಿತೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಈ ಹಿಂದೆ ಕೆಂಗೇರಿ ಠಾಣೆಯಲ್ಲಿ ವಂಚನೆ ಪ್ರಕರಣದ ಸಂಬಂಧ ಈಕೆಯ ಮೇಲೆ ದೂರು ದಾಖಲಾಗಿ ಸಿಸಿಬಿ ಪೊಲೀಸರು ವಿಚಾರಣೆಯನ್ನು ನಡೆಸಿದ್ದರು.