21 ವರ್ಷದ ಬಳಿಕ ಭಾರತದ ಮಹಿಳೆಯ ಮುಡಿಗೇರಿದ ಮಿಸೆಸ್ ವರ್ಲ್ಡ್ ಕಿರೀಟ...!
Monday, December 19, 2022
ನವದೆಹಲಿ: ಭಾರತದ ಸರ್ಗಂ ಕೌಶಲ್ ಅವರು ಮಿಸೆಸ್ ವರ್ಲ್ಡ್ 2022 ಕಿರೀಟವನ್ನು ಮುಡಿಗೇರಿಸಿದ್ದಾರೆ. ಈ ಮೂಲಕ 21 ವರ್ಷಗಳ ಬಳಿಕ ಭಾರತಕ್ಕೆ ಮಿಸೆಸ್ ವರ್ಲ್ಡ್ ಪಟ್ಟ ಒಲಿದು ಬಂದಂತಾಗಿದೆ. 63 ದೇಶಗಳು ಭಾಗವಹಿಸಿದ್ದ ಮಿಸೆಸ್ ವರ್ಲ್ಡ್ 2022 ಸ್ಪರ್ಧೆಯಲ್ಲಿ ಭಾರತದ ಸರ್ಗಂ ಕೌಶಲ್ ವಿಜೇತರಾಗಿದ್ದಾರೆ.
ಮಿಸೆಸ್ ವರ್ಲ್ಡ್ 2021 ಆಗಿದ್ದ ಶಾಯ್ಲಿನ್ ಫೋರ್ಡ್ ಶನಿವಾರ ಸರ್ಗಂ ಕೌಶಲ್‌ಗೆ ಮಿಸೆಸ್ ವರ್ಲ್ಡ್ 2022 ಕಿರೀಟವನ್ನು ತೊಡಿಸಿದರು. ಮಿಸೆಸ್ ಪಾಲಿನೇಷ್ಯಾ ಹಾಗೂ ಮಿಸೆಸ್ ಕೆನಡಾ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು. '21 ವರ್ಷಗಳ ಬಳಿಕ ಮಿಸೆಸ್ ವರ್ಲ್ಡ್ ಕಿರೀಟ ಮರಳಿ ನಮಗೆ ದೊರಕಿದೆ' ಎಂದು ಸರ್ಗಂ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ. 2001ರಲ್ಲಿ ನಟಿ ಹಾಗೂ ರೂಪದರ್ಶಿಯಾದ ಅದಿತಿ ಗೋವಿತ್ರಿಕರ್ ಭಾರತದ ಪ್ರತಿನಿಧಿಯಾಗಿ ಸ್ಪರ್ಧಿಸಿ ಮಿಸೆಸ್ ವರ್ಲ್ಡ್ ಕಿರೀಟವನ್ನು ಮುಡಿಗೇರಿಸಿದ್ದರು. ಅದಾಗ ಬಳಿಕ 21 ವರ್ಷಗಳ ಬಳಿಕ ಈ ಬಾರಿ ಮಿಸೆಸ್ ವರ್ಲ್ಡ್ ಭಾರತಕ್ಕೆ ಸಿಕ್ಕಿರುವುದು.
ಜಮ್ಮು-ಕಾಶ್ಮೀರದ ಸರ್ಗಂ ಕೌಶಲ್ ಅವರು ಈ ವರ್ಷದ ಜೂನ್‌ನಲ್ಲಿ ಮಿಸೆಸ್ ಇಂಡಿಯಾ ವರ್ಲ್ಡ್ 2022-23 ಆಗಿ ಆಯ್ಕೆ ಆಗಿದ್ದರು. ಈ ಮೂಲಕ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ, ಮಿಸೆಸ್ ವರ್ಲ್ಡ್ 2022 ಆಗಿ ಹೊರಹೊಮ್ಮಿದ್ದಾರೆ. ವಿವಾಹಿತೆಯರಿಗೆಂದೇ ಆಯೋಜಿಸಲಾಗುವ ಈ ಮಿಸೆಸ್ ವರ್ಲ್ಡ್ ಸ್ಪರ್ಧೆ 1984ರಲ್ಲಿ ಆರಂಭಗೊಂಡಿದೆ. ಆರಂಭದಲ್ಲಿ ಇದನ್ನು ಮಿಸೆಸ್ ವುಮನ್ ಆಫ್ ದ ವರ್ಲ್ಡ್ ಎಂದು ಕರೆಯಲಾಗುತ್ತಿತ್ತು. ಬಳಿಕ 1988ರಲ್ಲಿ ಇದನ್ನು ಮಿಸೆಸ್ ವರ್ಲ್ಡ್ ಎಂದು ಮರು ನಾಮಕರಣ ಮಾಡಲಾಯಿತು. ಸುಮಾರು 80 ರಾಷ್ಟ್ರಗಳು ಸಾಮಾನ್ಯವಾಗಿ ಇದರಲ್ಲಿ ಭಾಗವಹಿಸುತ್ತಿದ್ದು, ಬಹುತೇಕವಾಗಿ ಅಮೆರಿಕನ್ನರೇ ವಿಜೇತರಾಗುತ್ತಿದ್ದರು.