ಡ್ರಗ್ಸ್ ವಿರುದ್ಧವೇ ಹೋರಾಡುತ್ತಿದ್ದ ಡಿವೈಎಫ್ಐ ಯುವ ನಾಯಕನ ಕರಾಳ ಮುಖ ಬಯಲು: ಈತನ ಮೊಬೈಲ್ ನಲ್ಲಿತ್ತು 30 ಮಹಿಳೆಯರ ವೀಡಿಯೋ
Wednesday, December 7, 2022
ಕೊಚ್ಚಿ: ಕೇರಳ ರಾಜ್ಯದಲ್ಲಿ ಡ್ರಗ್ಸ್ ವಿರುದ್ಧ ಹೋರಾಟ ನಡೆಸುತ್ತಿದ್ದ ಡಿವೈಎಫ್‌ಐ ವಿಲವೋರ್ಕ್ಕಲ್ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ ಹಾಗೂ ಯುವತಿಯರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಆರೋಪದಲ್ಲಿ ಬಂಧಿತನಾಗಿದ್ದಾನೆ.
ಡಿವೈಎಫ್‌ಐ ವಿಲವೋರ್ಕ್ಕಲ್ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಜೆ.ಜಿನೇಶ್ (29) ಬಂಧಿತ ಆರೋಪಿ. ಈತನೊಂದಿಗೆ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಎಸ್. ಸುಮೇಜ್ (21), ಎ. ಅರುಣ್ (27), ಎಸ್. ಅಭಿಜಿತ್ (20), ಆರ್. ವಿಷ್ಣು (20), ಸಿಬಿ (20), ಎ. ಅನಂತು (18) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಜೆ.ಜಿನೇಶ್ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಬಂಧಿತನಾಗಿದ್ದ. ಪೊಲೀಸರು ಆರೋಪಿಯ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದ ಪೊಲೀಸರಿಗೆ ಈ ಮಾದಕದ್ರವ್ಯಗಳ ವಿರುದ್ಧದ ಹೋರಾಟಗಾರನ ಮತ್ತೊಂದು ಮುಖವಾಡ ಬಯಲಾಗಿದೆ.
ನಮ್ಮ ಸಮಾಜ ಮಾದಕ ವಸ್ತುಗಳ ಮಾಯಾಜಾಲದಿಂದ ಮುಕ್ತವಾಗಬೇಕು ಎಂದು ಹೋರಾಡುತ್ತಿದ್ದ ಜಿನೇಶ್, ಇದೀಗ ಅದೇ ಮಾದಕ ಜಾಲಕದಲ್ಲಿ ಸಿಕ್ಕಿಬಿದ್ದಿದ್ದಾನೆ. ಅಲ್ಲದೆ ಜಿನೇಶ್ ಫೋನ್‌ನಲ್ಲಿ 16 ವರ್ಷದ ಅಪ್ರಾಪ್ತೆಯೂ ಸೇರಿದಂತೆ 30 ಮಹಿಳೆಯರೊಂದಿಗೆ ಸಂಭೋಗ ನಡೆಸಿರುವ ವೀಡಿಯೋಗಳು ದೊರಕಿವೆ. ಅಲ್ಲದೆ ಯುವತಿಯರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿರುವ ದೃಶ್ಯಗಳು ಲಭ್ಯವಾಗಿವೆ. ಜೊತೆಗೆ ಆತ ಕತ್ತಿ ಚಾಕು ಹಾಗೂ ಮಚ್ಚು ಮುಂತಾದ ಅಪಾಯಕಾರಿ ಆಯುಧಗಳನ್ನು ಬಳಸಿರುವ ವೀಡಿಯೋಗಳು ಪೊಲೀಸರಿಗೆ ಸಿಕ್ಕಿವೆ. ಈತನ ಮೊಬೈಲ್ ಫೋನ್ ಅನ್ನು ಇನ್ನಷ್ಟು ಪರೀಕ್ಷೆ ಒಳಪಡಿಸಲು ತಾಂತ್ರಿಕ ಪರೀಕ್ಷೆಗೆ ಕಳುಹಿಸಲಾಗಿದೆ.
ಅಂದಹಾಗೆ ಜೆ.ಜಿನೇಶ್ ಹಿಂದಿ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾನೆ. ಇದೀಗ 16 ವರ್ಷದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಜೆ.ಜಿನೇಶ್ ಸೇರಿದಂತೆ 7 ಮಂದಿಯನ್ನು ಬಂಧಿಸಲಾಗಿದೆ. ಇವರ ಮೇಲೆ ಪೊಕ್ಸೊ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಓರ್ವ ದ್ವಿತೀಯ ಪಿಯು ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಮೊಬೈಲ್ ಫೋನ್ ಮೂಲಕ ಪರಿಚಯವಾದ ವ್ಯಕ್ತಿಗಳು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದು ಬಾಲಕಿಯ ಆರೋಪಿಸಿದ್ದಾಳೆ.