400 ಅಡಿ ಆಳದ ಕೊಳವೆ ಬಾವಿಯೊಳಗೆ ಬಿದ್ದ ಬಾಲಕ: ಬದುಕಿ ಬರಲೆಂದು ಗ್ರಾಮಸ್ಥರ ಪ್ರಾರ್ಥನೆ
Wednesday, December 7, 2022
ಬೆತುಲ್: ಆಟ ಆಡುತ್ತಿದ್ದ 8 ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ 400 ಅಡಿ ಆಳದ ಕೊಳವೆ ಬಾವಿಯೊಳಗೆ ಬಿದ್ದಿರುವ ಆತಂಕಕಾರಿ ಘಟನೆ ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಮಾಂಡವಿ ಗ್ರಾಮದಲ್ಲಿ ಮಂಗಳವಾರ ಸಂಜೆ 5ಗಂಟೆಯ ಸುಮಾರಿಗೆ ನಡೆದಿದೆ.
ಬೇತುಲ್ ಜಿಲ್ಲೆಯ ತನ್ಮಯ್ ದಿಯಾವಾರ್ ಎಂಬ ಬಾಲಕನೇ ಕೊಳವೆ ಬಾವಿಗೆ ಬಿದ್ದ ಬಾಲಕ. ಗ್ರಾಮದ ಮೈದಾನದಲ್ಲಿ ಆಡುತ್ತಿದ್ದ ತನ್ಮಯ್, ಇತ್ತೀಚೆಗಷ್ಟೇ ಅಗೆದಿದ್ದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ. ಸದ್ಯ ಬಾಲಕನ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕೊಳವೆ ಬಾವಿಯ ಸುತ್ತಮುತ್ತಲಿನ ಪ್ರದೇಶವನ್ನು ಅಗೆಯಲು ಅರ್ಥಮೂವಿಂಗ್ ಯಂತ್ರವನ್ನು ವ್ಯವಸ್ಥೆ ಮಾಡಲಾಗಿದೆ. ಬಾಲಕನಿಗೆ ಆಕ್ಸಿಜನ್ ಒದಗಿಸಲು ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಆಥನರ್ ಪೊಲೀಸ್ ಠಾಣೆಯ ಅಧಿಕಾರಿ ಅನೊಲ್ ಸೆ ತಿಳಿಸಿದ್ದಾರೆ.
ಕೊಳವೆ ಬಾವಿಯ ಸುಮಾರು 60 ಅಡಿ ಆಳದಲ್ಲಿ ಬಾಲಕ ಸಿಲುಕಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕ ಬದುಕಿ ಬರಲೆಂದು ಮಧ್ಯ ಪ್ರದೇಶದ ಜನರು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.